ರಾಷ್ಟ್ರೀಯ

ಜಮ್ಮು ಹಾಗೂ ಕಾಶ್ಮೀರ: 2.26 ಲಕ್ಷ ಸಂತ್ರಸ್ತರ ರಕ್ಷಣೆ: ಸೇನೆ

Pinterest LinkedIn Tumblr

JammuFlood2

ಜಮ್ಮು, ಸೆ. 15: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಜಮ್ಮು ಹಾಗೂ ಕಾಶ್ಮೀರದಲ್ಲಿನ ರಕ್ಷಣಾ ಕಾರ್ಯಾಚರಣೆಯು ಇಂದಿಗೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ ಪ್ರವಾಹಕ್ಕೆ ತುತ್ತಾಗಿರುವ ಒಟ್ಟು 2.26 ಲಕ್ಷ ಮಂದಿಯನ್ನು ರಕ್ಷಿಸಲಾಗಿದೆಯೆಂದು ಸೇನಾ ಮೂಲಗಳು ತಿಳಿಸಿವೆ. ಒಟ್ಟು ಸಂತ್ರಸ್ತರ ಪೈಕಿ 1.40 ಮಂದಿಯನ್ನು ಸೇನೆಯೇ ರಕ್ಷಿಸಿದೆ ಎಂದು ರಕ್ಷಣಾ ವಕ್ತಾರ ಕೊಲೊನಿಯಲ್ ಎಸ್.ಡಿ.ಗೋಸ್ವಾಮಿ ತಿಳಿಸಿದ್ದಾರೆ. ಜಮ್ಮು ಪ್ರಾಂತ್ಯದಲ್ಲಿ ಸೇನಾ ಪಡೆಯು ‘ಮಿಷನ್ ರಾಹತ್’ ಎಂಬ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರೆ, ಕಾಶ್ಮೀರದಲ್ಲಿ ರಕ್ಷಣಾ ಹಾಗೂ ಪರಿಹಾರಕ್ಕಾಗಿ ‘ಮಿಷನ್ ಸಹಾಯತಾ’ ಎಂಬ ಹೆಸರಿನ ಕಾರ್ಯಾಚರಣೆಯಲ್ಲಿ ಸೈನಿಕರು ತಲ್ಲೀನರಾಗಿದ್ದಾರೆಂದು ಅವರು ತಿಳಿಸಿದ್ದಾರೆ.

ಭಾರತೀಯ ವಾಯುಪಡೆ ಹಾಗೂ ಸೇನಾ ವಿಮಾನಯಾನ ಕಾರ್ಪ್ಸ್‌ನ 80 ಸಾರಿಗೆ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೇನೆಯು ಸುಮಾರು 30,000 ಸೈನಿಕರನ್ನು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಿದೆ. 5,08,000 ಲೀಟರ್‌ಗಿಂತಲೂ ಹೆಚ್ಚಿನ ನೀರು ಹಾಗೂ ಸುಮಾರು 1,054 ಟನ್‌ಗಿಂತಲೂ ಹೆಚ್ಚಿನ ಆಹಾರ ಪೊಟ್ಟಣಗಳು, ಬೇಯಿಸಿದ ಆಹಾರಗಳನ್ನು ನೆರೆ ಸಂತ್ರಸ್ತ ಪ್ರದೇಶಗಳಿಗೆ ಹಂಚಲಾಗಿದೆ ಎಂದರು.

ಕೇಂದ್ರ ಜವಳಿ ಸಚಿವಾಲಯ, ರೆಡ್ ಕ್ರಾಸ್ ಸೊಸೈಟಿ ಹಾಗೂ ಜಾರ್ಖಂಡ್ ಮತ್ತು ಪಂಜಾಬ್ ಸರಕಾರವು ಒದಗಿಸಿಕೊಟ್ಟ ಸುಮಾರು 33,000 ಕಂಬಳಿಗಳನ್ನು ಇಂದು ರಾಜ್ಯಕ್ಕೆ ರವಾನಿಸ ಲಾಗಿದೆ. ನೆರೆ ಸಂತ್ರಸ್ತರಿಗಾಗಿ ಈ ಹಿಂದೆ 8,200 ಕಂಬಳಿಗಳು ಹಾಗೂ 1,572 ಟೆಂಟ್‌ಗಳನ್ನು ಪೂರೈಸಿಕೊಡಲಾಗಿತ್ತು. ಇದುವರೆಗೆ ಹೆಲಿಕಾಪ್ಟರ್‌ಗಳು ಹಾಗೂ ಸೇನಾಪಡೆ ವಿಮಾನಗಳು ಒಟ್ಟು 2,451 ಬಾರಿ ಹಾರಾಟ ನಡೆಸಿದೆ.

3,435 ಟನ್‌ಗಳಷ್ಟು ಪರಿಹಾರ ಸಾಮಾಗ್ರಿಗಳನ್ನು ಭಾರತೀಯ ವಾಯುಪಡೆಯು ಕೆಳಕ್ಕಿಳಿಸಿದೆ ಎಂದು ಅವರು ಹೇಳಿದ್ದಾರೆ. ನೌಕಾಪಡೆಯ 224 ಬೋಟ್‌ಗಳು ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯ 148 ಬೋಟ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ ಎಂದು ಗೋಸ್ವಾಮಿ ತಿಳಿಸಿದ್ದಾರೆ. ಶ್ರೀನಗರ ಹಾಗೂ ಜಮ್ಮು ಪ್ರಾಂತ್ಯದಲ್ಲಿ ಸೇನಾ ಪಡೆಗಳು 19 ಪರಿಹಾರ ಶಿಬಿರಗಳನ್ನು ತೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

Write A Comment