ಮುಂಬೈ

ಗೇಮ್ ಆಡಿದ್ದಕ್ಕೆ ಮೊಬೈಲ್ ಕಿತ್ತುಕೊಂಡ ತಾಯಿ; ಆತ್ಮಹತ್ಯೆ ಮಾಡಿಕೊಂಡ ಮಗ

Pinterest LinkedIn Tumblr


ಮುಂಬೈ (ಜು. 23): ಮೊಬೈಲ್​ನಲ್ಲಿ ವಿಡಿಯೋ ಗೇಮ್ ಆಡಬೇಡ ಎಂದು ಜೋರು ಮಾಡಿದ ಅಮ್ಮ ಮೊಬೈಲನ್ನು ಕಿತ್ತುಕೊಂಡಿದ್ದಕ್ಕೆ ಬೇಸರಗೊಂಡ 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಮುಂಬೈನಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ.

ಮುಂಬೈನ 12 ವರ್ಷದ ಬಾಲಕ ತನ್ನ ಅಮ್ಮ ಮೊಬೈಲ್​ನಲ್ಲಿ ವಿಡಿಯೋ ಗೇಮ್ ಆಡಬೇಡ ಎಂದು ಹೇಳಿದ್ದಕ್ಕೆ ಬೇಸರಗೊಂಡು ತನ್ನ ರೂಮಿನಲ್ಲಿ ದುಪಟ್ಟಾದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಲಾಕ್​ಡೌನ್ ಬಳಿಕ ಮನೆಯಲ್ಲೇ ಆನ್​ಲೈನ್ ತರಗತಿಗಳು ನಡೆಯುತ್ತಿದ್ದುದರಿಂದ ಮನೆಯಲ್ಲೇ ಇದ್ದ ಬಾಲಕ ಮೊಬೈಲ್​ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಮೊಬೈಲ್ ಗೇಮಿಗೆ ಅಂಟಿಕೊಂಡಿದ್ದ ಮಗನನ್ನು ಅಮ್ಮ ಆಗಾಗ ಗದರುತ್ತಿದ್ದಳು.

ಇತ್ತೀಚೆಗೆ ಹೆಚ್ಚು ಸಮಯವನ್ನು ಮೊಬೈಲ್‍ನಲ್ಲೇ ಕಳೆಯುತ್ತಿದ್ದ ಬಾಲಕನಿಗೆ ಆತ ಮೊಬೈಲ್‍ನಲ್ಲಿ ಹೆಚ್ಚು ಸಮಯ ಆಟವಾಡಬೇಡ ಎಂದು ಬೈದಿದ್ದಾಳೆ. ಆದರೆ, ಅದನ್ನು ಕೇಳದ ಬಾಲಕ ಮೊಬೈಲ್‍ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದ ಕೋಪಗೊಂಡ ತಾಯಿ ಮೊಬೈಲ್ ಅನ್ನು ಕಿತ್ತುಕೊಂಡು ರೂಮಿನಲ್ಲಿಟ್ಟಿದ್ದಾಳೆ. ಅಮ್ಮ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಾದ ಬಾಲಕ ಮನೆಯ ಮೂರನೇ ಮಹಡಿಯಲ್ಲಿರುವ ರೂಮ್‍ಗೆ ಹೋಗಿದ್ದಾನೆ. ಮಗನಿಗೆ ಕೋಪ ಬಂದಿದೆ ಎಂದು ಗೊತ್ತಾದರೂ ಅಮ್ಮ ಸಮಾಧಾನ ಮಾಡಲು ಹೋಗಲಿಲ್ಲ.

ಅರ್ಧ ಗಂಟೆಯಾದರೂ ಮಗ ರೂಮಿನಿಂದ ಹೊರಗೆ ಬಾರದ್ದರಿಂದ ಆತನ ಅಮ್ಮ ಆತನ ರೂಮಿಗೆ ಹೋಗಿ ನೋಡಿದ್ದಾಳೆ. ಆಗ ಆ ಬಾಲಕ ತನ್ನ ಅಮ್ಮನ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಆತ ಸಾವನ್ನಪ್ಪಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments are closed.