ಕಲಬುರ್ಗಿ; ಕಲಬುರ್ಗಿಯಲ್ಲಿ ಕೊರೋನಾ ರೋಗಿಗಳ ಹಾಟ್ ಹಾಟ್ ಸುದ್ದಿಗಳ ಜೊತೆಗೆ, ನಾನ್ ಕೋವಿಡ್ ಸಾವುಗಳೂ ಸದ್ದು ಮಾಡಲಾರಂಭಿಸಿವೆ. ವೆಂಟಿಲೇಟರ್ ಕೊರತೆಯ ನೆಪ ಮಾಡಿ ಇ.ಎಸ್.ಐ.ಸಿ. ಆಸ್ಪತ್ರೆ ಸಿಬ್ಬಂದಿ ಇಬ್ಬರು ಮಹಿಳೆಯರನ್ನು ಬೇರೆ ಜಿಮ್ಸ್ ಗೆ ಸಾಗಹಾಕಿದ್ದ ಘಟನೆ ಮೊನ್ನೆ ನಡೆದಿತ್ತು. ಹೀಗೆ ಸಾಗ ಹಾಕಿದ್ದ ಇಬ್ಬರೂ ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಆ ಮಹಿಳೆಯರ ಜೊತೆಗೆ ಒಟ್ಟು ಎಂಟು ಮಹಿಳೆಯರು ಇ.ಎಸ್.ಐ.ಸಿ.ಯಲ್ಲಿ ಆಕ್ಸಿಜನ್ ಕೊರತೆ ಇದ್ದುದರಿಂದ ಸಾವನ್ನಪ್ಪಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ ಮಾಡಿರೋದು ಜಿಲ್ಲೆಯಲ್ಲಿ ಕಿಡಿ ಹೊತ್ತಿಸಿದೆ. ಆಕ್ಸಿಜನ್ ಕೊರತೆಯಿಂದ ಕಲಬುರ್ಗಿಯ ಇ.ಎಸ್.ಐ.ಸಿ.ಯಲ್ಲಿ ಎಂಟು ರೋಗಿಗಳು ಸಾವನ್ನಪ್ಪಿರುವ ಆರೋಪಕ್ಕೆ ಸಂಬಂಧಿಸಿ ತನಿಖೆಗೆ ಕಲಬುರ್ಗಿ ಡಿಸಿ ಶರತ್ ಬಿ., ತನಿಖಾ ಸಮಿತಿ ರಚಿಸಿದ್ದಾರೆ.
ಆಕ್ಸಿಜನ್ ಕೊರತೆಯಿಂದ ಮಹಿಳೆ ಸಾವನ್ನಪ್ಪಿರುವುದಾಗಿ ಸಂಬಂಧಿಕರೊಬ್ಬರು ಇ.ಎಸ್.ಐ.ಸಿ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇ.ಎಸ್.ಐ.ಸಿ.ಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟಪಡಿಸಿದ್ದರು. ಡಿಸಿ ಹೇಳಿಕೆಗೆ ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದರು. ಇ.ಎಸ್.ಐ.ಸಿಯಲ್ಲಿ ಆಕ್ಸಿಜನ್ ಕೊರತೆಯಿಂದ ಎಂಟು ರೋಗಿಗಳ ಸಾವನ್ನಪ್ಪಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ರೋಗಿಯ ಸಂಬಂಧಿಯೊಬ್ಬರ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪ್ರಿಯಾಂಕ್ ಖರ್ಗೆ, ಇವರು ಹೇಳುತ್ತಿರುವುದು ಸುಳ್ಳೇ ಎಂದು ಪ್ರಶ್ನಿಸಿದ್ದರು.
ಇಎಸ್ ಐ ಸಿಯಲ್ಲಿ ಏನೂ ನಡೆದೇ ಇಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ ನೊಂದಿತ ಮಹಿಳೆಯ ಮಗನ ಮಾತುಗಳನ್ನು ಒಮ್ಮೆ ಕೇಳಿನೋಡಿ ಎಂದಿದ್ದರು. ರೋಗಿ ಗುಣಮುಖರಾಗುತ್ತಿದ್ದರೂ ಅವರ ಮನೆಯವರ ಗಮನಕ್ಕೆ ತರದೆ ಇಎಸ್ಐಸಿಯಿಂದ ಜಿಮ್ಸ್ ಗೆ ವರ್ಗಾಯಿಸಲಾಗಿದೆ. ಹಾಗೆ ಮಾಡಿರುವುದಕ್ಕೆ ಕಾರಣ ಕೇಳಿದರೆ ಇಎಸ್ಐಸಿ ನಲ್ಲಿ ಆಕ್ಸಿಜನ್ ಕೊರತೆ ಇದೆಯೆಂದು ಹೇಳಲಾಗಿದೆ ಎಂದು ಶಾಸಕರು ಟ್ವೀಟ್ ನಲ್ಲಿ ಸರಕಾರದ ಕ್ರಮವನ್ನು ಟೀಕಿಸಿದ್ದರು.
ಸರ್ಕಾರ ಉದ್ದೇಶಪೂರ್ವಕವಾಗಿ ವಿಷಯ ಮುಚ್ಚಿಡುತ್ತಿದೆ. ಆಕ್ಸಿಜನ್ ಕೊರತೆ ಇಲ್ಲ, ವೆಂಟಿಲೇಟರ್ ಸಮಸ್ಯೆ ಇಲ್ಲ ಅನ್ನೋದಾದ್ರೆ ಇಎಸ್ಐಸಿಯಲ್ಲಿ ರೋಗಿಗಳನ್ನು ಏಕೆ ದಾಖಲಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಕಾರಣ ಅಲ್ಲಿನ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಟ್ವಿಟ್ಟರ್ ನಲ್ಲಿ ಪ್ರಿಯಾಂಕ್ ಲೇವಡಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಐವರು ಸದಸ್ಯರನ್ನೊಳಗೊಂಡ ತನಿಖಾ ಸಮಿತಿಯನ್ನು ಡಿಸಿ ರಚಿಸಿದ್ದಾರೆ. ಜಿಮ್ಸ್, ಬಸವೇಶ್ವರ ಹಾಗೂ ಕೆ.ಬಿ.ಎನ್ ಆಸ್ಪತ್ರೆಯ ಐವರು ವೈದ್ಯರ ತಂಡದ ಸಮಿತಿ ರಚಿಸಿದ್ದು, ಮೂರು ದಿನದೊಳಗಾಗಿ ವರದಿ ಬರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Comments are closed.