ರಾಷ್ಟ್ರೀಯ

84 ಕೋಟಿ ಹಗರಣದಲ್ಲಿ ಕೇಂದ್ರ ಸಚಿವ ಶೇಖಾವತ್‌: ವಿಚಾರಣೆಗೆ ಕೋರ್ಟ್ ಆದೇಶ

Pinterest LinkedIn Tumblr


ಜೈಪುರ: ಸಂಜೀವಿನಿ ಕ್ರೆಡಿಟ್‌ ಸಹಕಾರ ಸಂಘದಲ್ಲಿ ಹೂಡಿಕೆದಾರರಿಗೆ 884 ಕೋಟಿ ರೂ. ವಂಚನೆ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ವಿಚಾರಣೆ ನಡೆಸುವಂತೆ ರಾಜಸ್ಥಾನ ಪೊಲೀಸರಿಗೆ ಜಿಲ್ಲಾ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಕೇಂದ್ರ ಸಚಿವರ ಪಾತ್ರದ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿ ವರದಿ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪವನ್‌ ಕುಮಾರ್‌ ಅವರು ಆದೇಶಿಸಿದರು.

2008ರಲ್ಲಿ ಪ್ರಾರಂಭದ ಸಂಜೀವಿನಿ ಕ್ರೆಡಿಟ್‌ ಸಹಕಾರ ಸಂಘ, ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಂಡಿತ್ತು. ನಂತರ ನಕಲಿ ಸಾಲಗಳ ಅಡಿಯಲ್ಲಿ ಹಣವನ್ನು ಹೊರತೆಗೆದು ಠೇವಣಿದಾರರನ್ನು ವಂಚಿಸಿದೆ ಎಂದು ಆರೋಪಿಸಲಾಗಿದೆ.

ಶೇಖಾವತ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಒಜಿ ನೋಟಿಸ್‌ ನೀಡಿದೆ. “ಈ ನೋಟಿಸ್‌ ಕಾಂಗ್ರೆಸ್‌ ಶಾಸಕರನ್ನು ಸೆಳೆದು ಅವರನ್ನು ಗೌಪ್ಯ ಸ್ಥಳದಲ್ಲಿಇರಿಸಿ ಸರಕಾರವನ್ನು ಅತಂತ್ರಗೊಳಿಸುವ ಯತ್ನಕ್ಕೆ ಸಂಬಂಧಿಸಿದ್ದಾಗಿದೆ,” ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಾಸಕರ ಖರೀದಿ ಯತ್ನ ಸಂಬಂಧ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೋ ಕುರಿತಂತೆಯೂ ಎಸ್‌ಒಜಿ ತನಿಖೆ ನಡೆಸುತ್ತಿದೆ. ಆದರೆ ಆ ಪ್ರಕರಣದಲ್ಲಿ ಶೇಖಾವತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ.

Comments are closed.