ಮುಂಬೈ

ನಿಸರ್ಗ ಸೈಕ್ಲೋನ್‌ ನಿಂದ ಬಚಾವಾದ ಮುಂಬೈ; ಭೂಮಿಗಪ್ಪಳಿಸುತ್ತಲೇ ವೇಗ ತಗ್ಗಿಸಿದ ಚಂಡಮಾರುತ

Pinterest LinkedIn Tumblr


ಮುಂಬೈ: ಭಾರೀ ಆತಂಕ ಸೃಷ್ಟಿಸಿದ್ದ ನಿಸರ್ಗ ಸೈಕ್ಲೋನ್‌ ಹೊಡೆತದಿಂದ ಮುಂಬೈ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಮಹಾರಾಷ್ಟ್ರದ ಅಲಿಭಾಗ್‌ ಬಳಿ ಪ್ರವೇಶಿಸಿದ ಸೈಕ್ಲೋನ್‌ ತನ್ನ ವೇಗವನ್ನು ತಗ್ಗಿಸಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

ಮಹಾರಾಷ್ಟ್ರಕ್ಕೆ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ನಿಸರ್ಗ ಅಬ್ಬರ ತಗ್ಗಿದ್ದು, ಗಾಳಿಯ ವೇಗ ಗಂಟೆಗೆ 40 ಕಿಮೀ ವೇಗಕ್ಕೆ ಇಳಿದಿದೆ. ಸ್ವಲ್ಪ ಮಳೆ ಬಿಟ್ಟರೆ ಮುಂಬೈನಲ್ಲಿ ಆತಂಕಪಡುವ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಮಹಾರಾಷ್ಟ್ರಕ್ಕೆ ಪ್ರವೇಶಿಸುವ ಮುನ್ನ ನಿಸರ್ಗ ದಕ್ಷಿಣದ ಕಡೆ ತನ್ನ ಪಥ ಬದಲಿಸಿದ್ದು ಪ್ರಭಾವ ಕಡಿಮೆಯಾಗಲು ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಮಂಗಳವಾರ ಅರಬ್ಬಿ ಸಮುದ್ರದಲ್ಲಿ ಹುಟ್ಟಿದ ನಿಸರ್ಗ ಸೈಕ್ಲೋನ್‌ ಮಹಾರಾಷ್ಟ್ರದಲ್ಲಿ ಭಾರೀ ಆತಂಕವನ್ನು ಮೂಡಿಸಿತ್ತು. ಮೊದಲೇ ಕೊರೊನಾದಿಂದ ಕಂಗಾಲಾಗಿರುವ ಮುಂಬೈ ನಗರಕ್ಕೆ ನಿಸರ್ಗ ಮತ್ತೊಂದು ಶಾಪವಾಗುತ್ತೆ ಎಂದು ಹೇಳಲಾಗಿತ್ತು. ಗಂಟೆಗೆ 120 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಇದು 150 ಕಿಮೀವರೆಗೂ ತಲುಪುವ ಸಾಧ್ಯತೆ ಇದೆ‌ ಎನ್ನಲಾಗಿತ್ತು.

ಆದರೆ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಬಾಗ್‌ ಬಳಿ ಭೂಮಿಗಪ್ಪಳಿಸಿದ ನಿಸರ್ಗ ಸೈಕ್ಲೋನ್‌ ತನ್ನ ವೇಗವನ್ನು 40 ಕಿಮೀ ತಗ್ಗಿಸಿದ್ದು, ಮುಂಬೈ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಸ್ವಲ್ಪ ಗಾಳಿ ಹಾಗೂ ಮಳೆ ಬಿಟ್ಟರೆ ಬೇರೆ ಹೇಳಿಕೊಳ್ಳುವಂತಹ ಅಪಾಯಗಳು ಸಂಭವಿಸಿಲ್ಲ ಎಂದು ಬೃಹನ್‌ ಮುಂಬೈ ನಗರ ಪಾಲಿಕೆ ಹೇಳಿದೆ.

ಇನ್ನು, ಕರಾವಳಿಯಲ್ಲಿ ಗುರುವಾರ ಮಧ್ಯಾಹ್ನದವರೆಗೂ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7ರವರೆಗೂ ಯಾವುದೆ ವಿಮಾನ ಸಂಚಾರ ಇರುವುದಿಲ್ಲ ಎಂದು ತಿಳಿಸಲಾಗಿದೆ. ಮಹಾರಾಷ್ಟ್ರ ಸೇರಿ ಗುಜರಾತ್‌, ದಿಯು ಮತ್ತು ದಮನ್‌ ಹಾಗೂ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿತ್ತು.

Comments are closed.