ಮುಂಬೈ

ಮಹಾರಾಷ್ಟ್ರದಲ್ಲಿ ಬಸ್‌ ಪ್ರಯಾಣ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರೀಕರಿಗೆ ನಿಷೇಧ

Pinterest LinkedIn Tumblr


ಮುಂಬೈ: ಕೊರೊನಾ ವೈರಸ್‌ ಹೊಡೆತಕ್ಕೆ ಮಹಾರಾಷ್ಟ್ರ ತತ್ತರಿಸಿದೆ. ಈ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ನಾಗರಿಕರು ಹಾಗೂ 10 ವರ್ಷದ ಕೆಳಗಿನ ಮಕ್ಕಳಿಗೆ ಪ್ರಯಾಣವನ್ನು ನಿಷೇಧಿಸಿದೆ.

ಶುಕ್ರವಾರದಿಂದ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಆರಂಭವಾಗಿದೆ. ಕಳೆದ ಎರಡು ದಿನಗಳಲ್ಲಿ ರೆಡ್‌ ಝೋನ್‌ ಅಲ್ಲದ 31 ಜಿಲ್ಲೆಗಳಲ್ಲಿ 20,000 ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಿದ್ದು, 4000 ಟ್ರಿಪ್‌ಗಳು ಆಗಿವೆ ಎಂದು ಮೂಲಗಳು ತಿಳಿಸಿವೆ.

ಇದರ ಜೊತೆ ಎಂಎಸ್‌ಆರ್‌ಟಿಸಿ ತನ್ನ ಬಸ್‌ಗಳಲ್ಲಿ ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಒಂದು ಬಸ್‌ನಲ್ಲಿ 22ಕ್ಕೂ ಹೆಚ್ಚು ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ. ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಿದೆ.

ಕೆಲ ಜಿಲ್ಲೆಗಳಲ್ಲಿ ಕೆಲವು ಪ್ರಯಾಣಿಕರೊಂದಿಗೆ ಬಸ್‌ಗಳು ಸಂಚರಿಸುತ್ತಿದ್ದು, ಒಂದು ಬಸ್‌ನಲ್ಲಿ ಕೇವಲ ಮೂರರಿಂದ ಐದು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಲಾಕ್‌ಡೌನ್‌ 3.0ದಲ್ಲಿ ಜಿಲ್ಲೆಯೊಳಗಡೆ ಸಾರ್ವಜನಿಕ ಸಾರಿಗೆಗೆ ಕೇಂದ್ರ ಅವಕಾಶ ನೀಡಿತ್ತು. ನಂತರದ ಲಾಕ್‌ಡೌನ್‌ನಲ್ಲಿ ಅಂತರ್‌ ಜಿಲ್ಲೆ ಸಂಚಾರಕ್ಕೆ ಅನುಮತಿಯನ್ನು ಕೇಂದ್ರ ನೀಡಿದೆ.

ದೇಶದಲ್ಲಿಯೇ ಅತಿ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಇದುವರೆಗೂ 50,231 ಕೊರೊನಾ ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಇದರಲ್ಲಿ 14,600 ಜನ ಗುಣಮುಖರಾಗಿದ್ದು, 1,635 ಜನ ಕೊರೊನಾದಿಂದ ಮರಣ ಹೊಂದಿದ್ದಾರೆ.

Comments are closed.