ಮುಂಬೈ

ಮುಂಬೈನಲ್ಲಿ 24 ಗಂಟೆಗಳಲ್ಲಿ 13 ಸಾವು, 324 ಹೊಸ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ

Pinterest LinkedIn Tumblr


ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 13 ಮಂದಿ ಸೋಂಕಿತರು ಸಾವನ್ನಪ್ಪಿದ್ದರೆ, ಮತ್ತೆ 324ಯಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಮುಂಬೈನಲ್ಲಿ ಒಟ್ಟು 324 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಮುಂಬೈ ಮಹಾನಗರಿಯಲ್ಲಿನ ಸೋಂಕಿತರ ಸಂಖ್ಯೆ 5,194ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದು ಒಟ್ಟು 13 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಮುಂಬೈನಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 204ಕ್ಕೆ ಏರಿಕೆಯಾಗಿದೆ. ಇದಲ್ಲದೆ ಇಂದು ಮುಂಬೈನಲ್ಲಿ ಒಟ್ಟು 135 ಮಂದಿ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಮುಂಬೈನಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 897ಕ್ಕೆ ಏರಿಕೆಯಾಗಿದೆ.

ಧಾರಾವಿಯಲ್ಲಿ ಮತ್ತೆ 34 ಹೊಸ ಸೋಂಕು ಪ್ರಕರಣ ದೃಢ
ಇನ್ನು ಏಷ್ಯಾದ ಅತೀ ದೊಡ್ಡ ಕೊಳಚೆ ಪ್ರದೇಶ ಧಾರಾವಿಯಲ್ಲಿ ಇಂದು ಮತ್ತೆ 34 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಆ ಮೂಲಕ ಧಾರಾವಿಯೊಂದರಲ್ಲೇ ಸೋಂಕಿತರ ಸಂಖ್ಯೆ 275ಕ್ಕೆ ಏರಿಕೆಯಾಗಿದೆ. ಅಂತೆಯೇ ಈ ವರೆಗೂ 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಹಾಟ್ ಸ್ಪಾಟ್ ಗಳಲ್ಲಿ ಕಟ್ಟೆಚ್ಚರ; ಇಂದು ಹೊಸ ಪ್ರಕರಣಗಳಿಲ್ಲ
ಇನ್ನು ಕೊರೋನಾ ವೈರಸ್ ಗೆ ತುತ್ತಾಗಿದ್ದ ಮುಂಬೈನ ಹಾಟ್ ಸ್ಪಾಟ್ ಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಧಾರಾವಿ, ಮಹಿಮ್ ಮತ್ತು ದಾದರ್ ಪ್ರದೇಶಗಳಲ್ಲಿನ ಹಾಟ್ ಸ್ಪಾಟ್ ಗಳಲ್ಲಿ ಸತತ 2ನೇ ದಿನ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.

ಶನಿವಾರ ಸಂಜೆಯಿಂದ ಈ ವರೆಗೂ ದೇಶದಲ್ಲಿ 47 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ ಮಹಾರಾಷ್ಟ್ರವೊಂದರಲ್ಲೇ 22 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ರಾಜಸ್ಥಾನದಲ್ಲಿ 8, ಮಧ್ಯ ಪ್ರದೇಶದಲ್ಲಿ 7, ಗುಜರಾತ್ ನಲ್ಲಿ 6 ಮತ್ತು ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 826ಕ್ಕೇರಿದೆ. ದೇಶದಲ್ಲೇ ಮಹಾರಾಷ್ಟ್ರದಲ್ಲಿ ಗರಿಷ್ಠ 7,628 ಸೋಂಕಿನ ಪ್ರಕರಣಗಳು ಮತ್ತು 323 ಸಾವುಗಳು ದಾಖಲಾಗಿವೆ.

ಕಳೆದ ಎರಡು ದಿನಗಳಿಂದ ಎರಡನೇ ಅತಿ ಹೆಚ್ಚು ಕೋವಿಡ್‌-19 ಪ್ರಕರಣಗಳನ್ನು ಹೊಂದಿರುವ ರಾಜ್ಯವಾದ ಗುಜರಾತ್, ಸೋಂಕಿನ ತೀವ್ರ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಇದುವರೆಗಿನ 3,071 ಮತ್ತು 133 ಸಾವುಗಳು ಇಲ್ಲಿ ಸಂಭವಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 2,625ಕ್ಕೆ ಏರಿಕೆಯಾಗಿದೆ, ಸಾವಿನ ಸಂಖ್ಯೆ 54ಕ್ಕೆ ತಲುಪಿದೆ. ಇದೇ ವೇಳೆ ಮಧ್ಯಪ್ರದೇಶದಲ್ಲಿ ಒಟ್ಟು 2,096 ಕೋವಿಡ್ ಪ್ರಕರಣಗಳು ಮತ್ತು 99 ಸಾವು ಸಂಭವಿಸಿದೆ. ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 2,083 ತಲುಪಿದ್ದು, 33 ಸಾವು ಸಂಭವಿಸಿದೆ. ತಮಿಳುನಾಡಿನಲ್ಲಿ 1,821 ಸೊಂಕಿತರು ಮತ್ತು 23 ಸಾವು ಉಂಟಾಗಿದೆ. ಉತ್ತರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 1,793 ಆಗಿದ್ದು, ಇದುವರೆಗೆ 27 ಸಾವುಗಳು ವರದಿಯಾಗಿವೆ.

Comments are closed.