ರಾಷ್ಟ್ರೀಯ

ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವ ಭಾರತದ ಹೆಗಲಿಗೆ

Pinterest LinkedIn Tumblr


ಹೊಸದಿಲ್ಲಿ: ಕೋವಿಡ್‌-19 ಸೋಂಕು ಉಂಟು ಮಾಡಿರುವ ಬಿಕ್ಕಟ್ಟಿನ ನಡುವೆಯೇ ಮಹತ್ವದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯ ನೇತೃತ್ವ ವಹಿಸಲು ಭಾರತ ಸಜ್ಜಾಗಿದೆ. ಮುಂದಿನ ತಿಂಗಳು ಜಿನೇವಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾರತ ಡಬ್ಲ್ಯೂಎಚ್‌ಒನ ಅಧ್ಯಕ್ಷ ಹೊಣೆಗಾರಿಕೆಗೆ ಹೆಗಲು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ಸೋಂಕಿನಿಂದ ವಿಶ್ವ ಕಂಗೆಟ್ಟಿದೆ. 28.4 ಲಕ್ಷ ಜನರು ಕೊರೊನಾ ಸೋಂಕಿತರಾಗಿದ್ದರೆ, 1.99 ಲಕ್ಷಕ್ಕೂ ಅಧಿಕ ಜನರನ್ನು ಇದು ಬಲಿ ಪಡೆದಿದೆ. ಪರಿಣಾಮಕಾರಿ ನಿಯಂತ್ರಣಾ ಕ್ರಮ ಅರಿಯದೇ ಪ್ರಬಲ ರಾಷ್ಟ್ರಗಳು ಚಡಪಡಿಸುತ್ತಿವೆ. ಇಂತಹ ಬಿಕ್ಕಟ್ಟಿನ ಹೊತ್ತನಲ್ಲಿ ಭಾರತವು ವಿಶ್ವ ಆರೋಗ್ಯ ವಲಯದ ಆಗುಹೋಗುಗಳನ್ನು ನಿಭಾಯಿಸುವ ಡಬ್ಲ್ಯೂಎಚ್‌ಒನ ನೇತೃತ್ವ ವಹಿಸಿಕೊಳ್ಳುತ್ತಿದೆ.

ಮೇ 22ರಂದು ವಾರ್ಷಿಕ ಸಭೆಯಲ್ಲಿ ಭಾರತಕ್ಕೆ ಈ ಪಟ್ಟ ದಕ್ಕಲಿದೆ. ಸದ್ಯ ಜಪಾನ್‌ ಈ ಸಂಸ್ಥೆಯ ನೇತೃತ್ವ ವಹಿಸಿದೆ. ಇನ್ನು ಡಬ್ಲ್ಯೂಎಚ್‌ಒ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಬಿಟ್ಟು ಕೊಡುವ ನಿರ್ಧಾರ ಕಳೆದ ವರ್ಷವೇ ಆಗಿತ್ತು.

ವಿಶ್ವ ಆರೋಗ್ಯ ಸಭೆ (ವರ್ಲ್ಡ್‌ ಹೆಲ್ತ್‌ ಅಸೆಂಬ್ಲಿ) ಮೇ 18 ರಂದು ಸಭೆ ಸೇರಲಿದ್ದು, ಈ ಸಭೆಯ ಸದಸ್ಯರು ಔಪಚಾರಿಕವಾಗಿ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಈ ಮಂಡಳಿಯಲ್ಲಿ 34 ಸದಸ್ಯರು ಇರಲಿದ್ದಾರೆ. ಭಾರತ ಇದರ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಭಾರತ ನೇತೃತ್ವದ ಈ ಮಂಡಳಿಯು ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಜೊತೆ ಜೊತೆಗೆ ಕೆಲಸ ಮಾಡಲಿದೆ.

ಮೇ ತಿಂಗಳಿಂದ ಮುಂದಿನ ಒಂದು ವರ್ಷದ ಮಟ್ಟಿಗೆ ಸಂಸ್ಥೆಯ ನೇತೃತ್ವವನ್ನು ಭಾರತ ವಹಿಸಲಿದೆ ಎಂದು ಮೂಲಗಳು ಖಚಿತಪಡಿಸಿವೆ.

Comments are closed.