ಮುಂಬೈ

ತೂಕ ಇಳಿಕೆಗೆ ನಿಷೇಧಿತ ಮಾತ್ರೆ ಸೇವನೆ – ಜಿಮ್ ಟ್ರೈನರ್ ಯುವತಿ ಸಾವು

Pinterest LinkedIn Tumblr


ಮುಂಬೈ: ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ ಮಾಡಿ 22 ವರ್ಷದ ಡ್ಯಾನ್ಸರ್, ಜಿಮ್ ಟ್ರೈನರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಮೃತ ಡ್ಯಾನ್ಸರನ್ನು ಮೇಘನಾ ದೇವಗಡ್ಕರ್ (22) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಡ್ಯಾನ್ಸರ್ ಮತ್ತು ಜಿಮ್ ಟ್ರೈನರ್ ಆಗಿದ್ದ ಈಕೆ ತೂಕ ಇಳಿಸಲು ನಿಷೇಧಿತ ಡೈನಿಟ್ರೋಫೆನಾಲ್ ಎಂಬ ಮಾತ್ರೆ ಸೇವಿಸಿದ್ದಾರೆ. ಮಾತ್ರೆ ಸೇವಿಸಿದ ಕೆಲ ಗಂಟೆಯೊಳಗೆ ಸಾವನ್ನಪ್ಪಿದ್ದಾರೆ.

ಮೇಘನಾ ಇಂದು ಬೆಳಗ್ಗೆ ಎಂದಿನಂತೆ ತಾನು ಹೊಸದಾಗಿ ಟ್ರೈನರ್ ಆಗಿ ಸೇರಿದ್ದ ಜಿಮ್‍ಗೆ ಬಂದು ವರ್ಕೌಟ್ ಆರಂಭಿಸುವ ಮೊದಲು ಈ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ಅದನ್ನು ಸೇವಿಸಿದ ಕೆಲ ಕ್ಷಣದಲ್ಲಿ ಅವರು ವಾಂತಿ ಮಾಡಲು ಶುರು ಮಾಡಿದ್ದಾರೆ. ಇದಾದ ನಂತರ ಆಕೆಯನ್ನು ಜಿಮ್ ನಲ್ಲಿ ಇದ್ದ ಕೆಲವರು ಅಲ್ಲಿಯೇ ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

ಮೇಘನಾಳನ್ನು ಪರೀಕ್ಷಿಸಿದ ವೈದ್ಯರು ನಂತರ ಲೈಫ್‍ಲೈನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಸಿಯಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಿಯಾನ್ ಆಸ್ಪತ್ರೆ ವೈದ್ಯರು ಆಕೆಯನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಸ್ವಲ್ಪ ಸಮಯದ ಕಾಲ ಐಸಿಯುವಿನಲ್ಲಿ ಇದ್ದ ಮೇಘನಾ ಅಲ್ಲೇ ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ನಿಷೇಧಿತ ಮಾತ್ರೆ ಸೇವಿಸಿದ ನಂತರ ಮೇಘನಾ ಹೈಪರ್ಥರ್ಮಿಯಾದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಈ ಮಾತ್ರೆ ಸೇವನೆಯಿಂದ ಅವರ ದೇಹದ ಉಷ್ಣತೆಯನ್ನು ಸಾಮಾನ್ಯಕ್ಕಿಂತ ಜಾಸ್ತಿ ಮಾಡಿದೆ. ಹೀಗಾಗಿ ಅವರ ದೇಹದಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ತೀವ್ರವಾಗಿ ಹೆಚ್ಚಾಗಿದ್ದು, ಮೇಘನಾ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಸಾಯುವುದಕ್ಕೂ ಮುನ್ನ ಮೇಘನಾ ಆಸ್ಪತ್ರೆಗೆ ಬಂದ ಪೊಲೀಸರಿಗೆ ನಾನು ತೂಕ ಕಮ್ಮಿ ಮಾಡಿಕೊಳ್ಳಲು ಡೈನಿಟ್ರೋಫೆನಾಲ್ ಮಾತ್ರೆಯನ್ನು ಸೇವಿಸಿದ್ದೆ ಎಂದು ಮಾಹಿತಿ ನೀಡಿದ್ದಾಳೆ. ಸದ್ಯ ಈ ಬಗ್ಗೆ ನೌಪಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷೇಧಿತ ಮಾತ್ರೆ ಮೇಘನಾ ಅವರಿಗೆ ಹೇಗೆ ದೊರಕಿದೆ ಎಂದು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Comments are closed.