ಮುಂಬೈ

ಭಾರತೀಯ ಮುಸ್ಲಿಮರ ವಲಸೆ?: ಗಡಿಭಾಗದಲ್ಲಿ ಮೊಬೈಲ್ ಸರ್ವಿಸ್ ಬಂದ್ ಮಾಡಿಸಿದ ಬಾಂಗ್ಲಾ

Pinterest LinkedIn Tumblr


ಮುಂಬೈ(ಡಿ. 31): ಭಾರತದಲ್ಲಿ ಎನ್​ಆರ್​ಸಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಹೊತ್ತಲ್ಲೇ ನೆರೆಯ ಬಾಂಗ್ಲಾದೇಶ ತನ್ನ ಗಡಿಯಲ್ಲಿ ಭದ್ರತೆ ಬಿಗಿಗೊಳಿಸುತ್ತಿದೆ. ಭಾರತದ ಗಡಿಯಲ್ಲಿ ಬಾಂಗ್ಲಾದೇಶ ಮೊಬೈಲ್ ಸೇವೆಗಳನ್ನೇ ಬಂದ್ ಮಾಡಿಸಿದೆ. ಭದ್ರತೆಯ ಕಾರಣವೊಡ್ಡಿ ಬಾಂಗ್ಲಾದೇಶ ಈ ಕ್ರಮ ತೆಗೆದುಕೊಂಡಿದೆ.

ಬಾಂಗ್ಲಾದೇಶದ ಟೆಲಿಕಾಂ ಸಂಸ್ಥೆಯ ಆದೇಶದ ಮೇರೆಗೆ ಭಾರತ-ಬಾಂಗ್ಲಾ ಗಡಿಯಾದ್ಯಂತ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಟೆಲಿಕಾಂ ಆಪರೇಟರ್​ಗಳು ಮೊಬೈಲ್ ಸೇವೆ ಸ್ಥಗಿತಗೊಳಿಸಿವೆ. ಈ ಆದೇಶ ಅನಿರ್ದಿಷ್ಟಾವಧಿಯವರೆಗೂ ಇದೆ.

ಕೆಲ ಅಧಿಕೃತ ಮೂಲಗಳ ಪ್ರಕಾರ ಭಾರತದಲ್ಲಿ ಎನ್​ಆರ್​ಸಿ ಹೋರಾಟ ನಡೆಯುತ್ತಿರುವುದಕ್ಕೂ ಬಾಂಗ್ಲಾದೇಶ ಮೊಬೈಲ್ ಸೇವೆ ಬಂದ್ ಮಾಡಿರುವುದಕ್ಕೂ ಸಂಬಂಧ ಇದೆ. ಭಾರತದಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಭಾರತೀಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಬರಬಹುದು ಎಂಬ ಆತಂಕದಲ್ಲಿ ಬಾಂಗ್ಲಾದೇಶ ಈ ಕ್ರಮ ತೆಗೆದುಕೊಂಡಿದೆ ಎಂದು ಅಲ್ಲಿಯ ಒಬ್ಬ ಅಧಿಕಾರಿ ತಿಳಿಸಿದ್ದಾರೆಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೊಂದಣಿ (ಎನ್​ಆರ್​ಸಿ) ಎರಡೂ ಕೂಡ ಮುಸ್ಲಿಮರನ್ನು ಗುರಿ ಮಾಡಿ ರೂಪಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಲವು ದಿನಗಳಿಂದ ದೇಶಾದ್ಯಂತ ನಿರಂತರವಾಗಿ ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಲಿಯ ಅಲ್ಪಸಂಖ್ಯಾತರಿಗೆ (ಮುಸ್ಲಿಮೇತರರು) ಭಾರತೀಯ ಪೌರತ್ವ ನೀಡುವುದು ಸಿಎಎ ಉದ್ದೇಶವಾಗಿದೆ. 2015ಕ್ಕೆ ಮುಂಚೆ ಭಾರತಕ್ಕೆ ವಲಸೆ ಬಂದ ಇಂಥ ವ್ಯಕ್ತಿಗಳು ಯಾವುದೇ ದಾಖಲೆಯಿಲ್ಲದೇ ಪೌರತ್ವ ಪಡೆಯಲು ಅವಕಾಶ ಇದೆ.ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿದ್ದು ಯಾಕೆ? ಸಂವಿಧಾನದಲ್ಲಿ ಧರ್ಮಭೇದ ಮಾಡಬಾರದೆಂದು ಹೇಳಿರುವ ಹಿನ್ನೆಲೆಯಲ್ಲಿ ಈ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಭಾರತದ ಜಾತ್ಯತೀತ ತತ್ವಕ್ಕೆ ಇದು ಧಕ್ಕೆ ತರುತ್ತದೆ. ಭಾರತೀಯ ಮುಸ್ಲಿಮರನ್ನು ದೇಶದಿಂದ ಹೊರಗೆ ಹೋಡಿಸುವ ಚಿತಾವಣೆ ಇದಾಗಿದೆ. ಬಡವರು, ಮಹಿಳೆಯರನ್ನು ಹೈರಾಣಗೊಳಿಸುತ್ತದೆ ಎಂಬಿತ್ಯಾದಿ ಆಕ್ಷೇಪಣೆಗಳನ್ನು ಪ್ರತಿಭಟನಾಕಾರರು ವ್ಯಕ್ತಪಡಿಸುತ್ತಿದ್ದಾರೆ.

Comments are closed.