ಕ್ರೀಡೆ

ಕೊಹ್ಲಿಯ ಖಾಸಗಿ ಫೋಟೊಗ್ರಾಫರ್‌ ಯಾರು?

Pinterest LinkedIn Tumblr


ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ಗೆಲುವಿನೊಂದಿಗೆ 2019ನ್ನು ಯಶಸ್ಸಿನ ಉತ್ತುಂಗದಲ್ಲಿ ಅಂತ್ಯಗೊಳಿಸಿರುವ ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ, ಇದೀಗ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.

ಹೊಸ ವರ್ಷವನ್ನು ಈ ಬಾರಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಆಚರಿಸುತ್ತಿರುವ ಕಿಂಗ್‌ ಕೊಹ್ಲಿ, ಸದ್ಯ ಸ್ವಿಜರ್ಲೆಂಡ್‌ ಪ್ರವಾಸದಲ್ಲಿದ್ದಾರೆ. ತಮ್ಮ ಸ್ವಿಸ್‌ ಪ್ರವಾಸದ ಹಲವು ಪೋಟೊಗಳನ್ನು ಈಗಾಗಲೇ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿರುವ ವಿರಾಟ್‌, ತಮ್ಮ ಅತ್ಯುತ್ತಮ ಚಿತ್ರಗಳ ಹಿಂದಿರುವ ಅದ್ಭುತ ಫೋಟೊಗ್ರಾಫರ್‌ ಯಾರೆಂಬುದನ್ನು ಬಹಿರಂಗ ಪಡಿಸಿದ್ದಾರೆ.

ಮಂಗಳವಾರ ತಮ್ಮ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಫೋಟೊ ಒಂದನ್ನು ಪ್ರಕಟಿಸಿರುವ ವಿರಾಟ್‌ ಕೊಹ್ಲಿ, “ನಿಮ್ಮ ಅತ್ಯುತ್ತಮ ಫೋಟೊಗ್ರಾಫರ್‌ ಫೋಟೊ ತೆಗೆಯುವಾಗಿ ಯಾವುದೇ ರೀತಿಯ ಅಂಜಿಕೆ ಇರುವುದಿಲ್ಲ,” ಎಂದು ಪತ್ನಿ ಅನುಷ್ಕಾ ಶರ್ಮಾ ಕ್ಲಿಕ್‌ ಮಾಡಿರುವ ತಮ್ಮ ಫೋಟೊ ಒಂದನ್ನು ವಿರಾಟ್‌ ಹಂಚಿಕೊಂಡಿದ್ದಾರೆ.

ಕಳೆದ ಡಿಸೆಂಬರ್‌ಗೆ ವಿರುಷ್ಕಾ ಜೋಡಿ ತಮ್ಮ ವಿವಾಹದ 2ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಇದಕ್ಕೂ ಮುನ್ನ ವಿರಾಟ್‌ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಗುಳಿದು ಪತ್ನಿ ಜೊತೆಗೆ ಭೂತಾನ್‌ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲೂ ಅನುಷ್ಕಾ ಶರ್ಮಾ ಕ್ಲಿಕ್ಕಿಸಿದ್ದ ಕೊಹ್ಲಿ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿತ್ತು.

ಅಂದಹಾಗೆ ಭಾರತ ತಂಡ ಕೊಹ್ಲಿ ಸಾರಥ್ಯದಲ್ಲಿ 2019ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದ ಸಾಧನೆ ಮಾಡಿದೆ. ಅಷ್ಟೇ ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತನ್ನ ನಂ.1 ಸ್ಥಾನವನ್ನು ಸತತ 4ನೇ ಬಾರಿ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಇನ್ನು ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದನ್ನು ಬಿಟ್ಟರೆ ಉಳಿದೆಲ್ಲಾ ಸರಣಿಗಳಲ್ಲೂ ಅಧಿಕಾರಯುತ ಪ್ರದರ್ಶನ ನೀಡಿದೆ.

ಹೊಸ ವರ್ಷದಲ್ಲೂ ಅಂಥದ್ದೇ ಪ್ರದರ್ಶನವನ್ನು ಎದುರು ನೋಡುತ್ತಿರುವ ಭಾರತ ತಂಡ ಮೊದಲಿಗೆ ಜ.5ರಂದು ಆರಂಭವಾಗಲಿರುವ ಪ್ರವಾಸಿ ಶ್ರೀಲಂಕಾ ವಿರುದ್ಧ ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿದ್ದು, ಬಳಿಕ ಜ.15-19ರವರೆಗೆ ಆಸ್ಟ್ರೇಲಿಯಾ ಎದುರು ಅಷ್ಟೇ ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನಾಡಲಿದೆ.

ತದನಂತರ ಜ.24ರಂದು ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು 5 ಪಂದ್ಯಗಳ ಟಿ20-ಐ, 3 ಪಂದ್ಯಗಳ ಏಕದಿನ ಕ್ರಿಕೆಟ್‌ ಮತ್ತು 2 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಪೈಪೋಟಿ ನಡೆಸಿ ತವರಿಗೆ ಹಿಂದಿರುಗಲಿದೆ.

Comments are closed.