ರಾಷ್ಟ್ರೀಯ

ಚಿನ್ನ ಖರೀದಿಸಲು ಸರಕಾರದಿಂದ ಪ್ರತಿ ವಧುವಿಗೆ 30 ಸಾವಿರ ರೂ.!

Pinterest LinkedIn Tumblr


ದಿಸ್ಪುರ್: ವಧುವಿನ ಮನೆಯವರಿಗೆ ಅಸ್ಸಾಂ ಸರ್ಕಾರ ಹೊಸ ವರ್ಷದ ಉಡುಗೊರೆಯೊಂದನ್ನು ನೀಡಿದೆ. ವಿವಾಹ ನೋಂದಾಯಿತ ಮಹಿಳೆಗೆ ಜನವರಿ 2020ರಿಂದ ಅರುಂಧತಿ ಚಿನ್ನದ ಯೋಜನೆಯನ್ನು ಅಸ್ಸಾಂ ಸರ್ಕಾರ ಪ್ರಾರಂಭಿಸಲಿದೆ.

ಈಗಾಗಲೇ ಅರುಂಧತಿ ಗೋಲ್ಡ್​ ಸ್ಕೀಮ್​ಗೆ ಅಸ್ಸಾಂ ಸರ್ಕಾರದಿಂದ ಅನುಮೋದನೆ ದೊರೆತಿದೆ. ಹೀಗಾಗಿ ಈ ಯೋಜನೆಯಿಂದ ಅಸ್ಸಾಂ ಸರ್ಕಾರಕ್ಕೆ ಹೆಚ್ಚುವರಿಯಾಗಿ 2020ನೇ ವರ್ಷದಲ್ಲಿ 800 ಕೋಟಿ ರೂ. ವೆಚ್ಚ ತಗುಲುತ್ತದೆ.

ಯೋಜನೆಯ ಪ್ರಕಾರ ಹೊಸದಾಗಿ ಮದುವೆಯಾದ ಮಹಿಳೆಗೆ 30,000 ರೂ. ಹಣವನ್ನು ಚಿನ್ನ ಖರೀದಿಸಲು ಸರ್ಕಾರ ನೀಡಲಿದೆ. ಯೋಜನೆಯ ಫಲಾನುಭವಿಯಾಗಲು ಮದುವೆಯ ಮುನ್ನ ವಧು ವಿಶೇಷ ಮದುವೆ ಕಾಯ್ದೆ 1954ರ ಅಡಿಯಲ್ಲಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಸ್ಸಾಂ ಹಣಕಾಸು ಸಚಿವ ಹಿಮಂತ್​ ಬಿಸ್ವಾ ಸರ್ಮಾ, ರಾಜ್ಯದಲ್ಲಿ ವಿವಾಹ ನೋಂದಣಿಯನ್ನು ಉತ್ತೇಜಿಸಲು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಹಿಳಾ ಸಬಲೀಕರಣದ ಉದ್ದೇಶವೂ ಇದರಲ್ಲಿ ಅಡಗಿದೆ ಎಂದಿದ್ದಾರೆ.

ಅರುಂಧತಿ ಗೋಲ್ಡ್​ ಸ್ಕೀಮ್​ಗೆ ಯಾರು ಅರ್ಹರು?
ವಧು ಮತ್ತು ವಧುವಿನ ತಂದೆಯ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯ ಫಲಾನುಭವಿಗೆ ಕನಿಷ್ಠ 18 ರಿಂದ 21 ವರ್ಷ ವಯಸ್ಸಾಗಿರಬೇಕು. ಬುಡಕಟ್ಟು ಜನಾಂಗದವರಿಗೆ ಪ್ರೌಢ ಶಿಕ್ಷಣ ಸೌಲಭ್ಯವೇ ಇನ್ನು ಕಠಿಣವಾಗಿರುವುದರಿಂದ ಅವರಿಗೆ ವಿದ್ಯಾರ್ಹತೆಯಲ್ಲಿ ವಿನಾಯಿತಿಯನ್ನು ಯೋಜನೆಯಡಿ ನೀಡಲಾಗಿದೆ.

Comments are closed.