ರಾಷ್ಟ್ರೀಯ

72 ವರ್ಷದ ಮುಸ್ಲಿಂ ಧರ್ಮಗುರುವಿಗೆ ಪೊಲೀಸರಿಂದ ಥಳಿತ

Pinterest LinkedIn Tumblr


ಮೀರತ್‌: ಪ್ಲಾಸ್ಟರ್‌ ಹಾಕಿದ ಕೈಯನ್ನು ಕುತ್ತಿಗೆಗೆ ನೇತು ಹಾಕಿಕೊಂಡಿರುವ ಮತ್ತು ದೇಹದ ಅನೇಗ ಭಾಗಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆದಿರುವ ಲಕ್ಷಣಗಳನ್ನು ತೋರುತ್ತಿರುವ 72 ವರ್ಷದ ಮುಸ್ಲಿಂ ಧರ್ಮ ಗುರುವೊಂದರ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಮುಜಫರ್‌ನಗರ ಪೊಲೀಸರು ಧರ್ಮ ಗುರುವಿನ ಮೇಲೆ ಅಮಾನವೀಯವಾಗಿ ಥಳಿಸಿದ ಬಗ್ಗೆ ಆರೋಪಗಳು ಕೇಳಿಬಂದಿವೆ.

ಶಿಯಾ ಧರ್ಮ ಗುರುವಾಗಿರುವ 72 ವರ್ಷದ ಆಸಾದ್‌ ರಾಜಾ ಹುಸೈನಿ ಮತ್ತು ಅವರ ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿದ್ದ 11 ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು. ಈ ಸಂದರ್ಭ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಂಪರ್ಕಿಸಿದಾಗ ಧರ್ಮ ಗುರು ಮತ್ತು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು ಮಾಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂಸಾಚಾರ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಬೆನ್ನತ್ತಿದ ಸಂದರ್ಭ ಮದರಸಾದ ಆವರಣವನ್ನು ಪ್ರವೇಶಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮೀನಾಕ್ಷಿ ಚೌಕ್‌ನ ಮುಜಫರಾಬಾದ್‌ ಸಮೀಪದ ಮದರಸಾದಲ್ಲಿ ಪ್ರಾಂಶುಪಾಲರಾಗಿರುವ ಮತ್ತು ಅನಾಥಾಶ್ರಮವನ್ನು ನಡೆಸುತ್ತಿರುವ ಹುಸೈನಿ ಮತ್ತು 40 ವಿದ್ಯಾರ್ಥಿಗಳನ್ನು ಡಿಸೆಂಬರ್‌ 20ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

200ಕ್ಕೂ ಹೆಚ್ಚು ಪೊಲೀಸರು ಮದರಸಾ ಆವರಣದೊಳಗೆ ನುಗ್ಗಿದರು. ಅಪ್ರಾಪ್ತ ಮಕ್ಕಳನ್ನು ಲೆಕ್ಕಿಸದೆ ಕೈಗೆ ಸಿಕ್ಕದ ಎಲ್ಲರ ಮೇಲೆಯೂ ಹಲ್ಲೆ ನಡೆಸಿದರು ಎಂದು ಮದರಸಾದಲ್ಲಿ ಕೆಲಸ ಮಾಡುತ್ತಿರುವ ನಯೀಮ್‌ ಎಂಬುವವರು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಮೂಲಗಳ ಪ್ರಕಾರ ಅನಾಥಾಶ್ರಮದಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಕೆಲವು ವಿದ್ಯಾರ್ಥಿಗಳ ಮೂಳೆ ಮುರಿತವಾಗಿದೆ ಎನ್ನಲಾಗಿದೆ.

ಮೀನಾಕ್ಷಿ ಚೌಕ್‌ ಮತ್ತು ಮಹಾವೀರ ಚೌಕ್‌ ಮಧ್ಯೆ ಕನಿಷ್ಠ 50,000 ಮಂದಿ ಸೇರಿದ್ದರು. ಪ್ರತಿಭಟನೆ ನೆಪದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದರು. ಹಿಂಸಾಚಾರ ನಡೆಸಲು ಆರಂಭಿಸಿದರು. ಗುಂಪನ್ನು ಚದುರಿಸಲು ಪ್ರಯತ್ನಿಸಿದೆವು. ಈ ಸಂದರ್ಭ ಮದರಸಾದ ಆವರಣದೊಳಗೆ ಪ್ರವೇಶಿಸಿದೆವು. ಕ್ಯಾಂಪಸ್‌ನ ಒಳಗಿಂದ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಮದರಸಾದ ಒಳ ಪ್ರವೇಶಿಸಿ 70 ಮಂದಿಯನ್ನು ವಶಕ್ಕೆ ಪಡೆದೆವು. ವಶಕ್ಕೆ ತೆಗೆದುಕೊಂಡಿದ್ದ ಎಲ್ಲ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಜಾಫರ್‌ನಗರದ ಎಸ್‌ಪಿ ಸತ್‌ಪಾಲ್‌ ಅಂತಿಲ್‌ ತಿಳಿಸಿದ್ದಾರೆ.

ಆದರೆ ಮದರಸಾದ ಸಿಬ್ಬಂದಿ ಹೇಳುವ ಪ್ರಕಾರ 28 ಮಂದಿಯನ್ನು ಬಿಡುಮಾಡಿದ್ದು, ಇನ್ನುಳಿದ 11 ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ.

Comments are closed.