ರಾಷ್ಟ್ರೀಯ

ಅಯೋಧ್ಯೆಯಲ್ಲಿ ಉತ್ತರಪ್ರದೇಶ ಸರ್ಕಾರದಿಂದ ಮಸೀದಿ ನಿರ್ಮಾಣಕ್ಕೆ ಐದು ಸ್ಥಳಗಳ ಗುರುತು

Pinterest LinkedIn Tumblr


ಲಕ್ನೋ: ಇತ್ತೀಚೆಗೆ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸಾಧ್ಯವಾಗಲಿರುವ ಐದು ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತಿಸಿದೆ.

ಬಾಬ್ರಿ ಮಸೀದಿ ಇದ್ದ ಸ್ಥಳ ಶ್ರೀರಾಮನ ಜನ್ಮಸ್ಥಳವಾಗಿದೆ ಎಂಬುದು ಹಿಂದುಗಳ ನಂಬಿಕೆಯಾಗಿದೆ. ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಿ, ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಐದು ಎಕರೆ ಸ್ಥಳ ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಮಿರ್ಜಾಪುರ್, ಶಂಶುದ್ದೀನ್ ಪುರ್ ಮತ್ತು ಚಾಂದ್ ಪುರ್ ನಲ್ಲಿ ಐದು ಸ್ಥಳಗಳನ್ನು ಗುರುತಿಸಿದ್ದು, ಈ ಪ್ರದೇಶ ಪವಿತ್ರ ಸ್ಥಳ ಎಂದು ಗುರುತಿಸಿರುವ ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ ಎಂದು ವರದಿ ತಿಳಿಸಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಟ್ರಸ್ಟಿಗಳು ಈ ಸ್ಥಳವನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಲಿ ಎಂದು ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ. ಅಯೋಧ್ಯೆ-ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ಪಂಚಸದಸ್ಯ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ 18 ಅರ್ಜಿಗಳನ್ನು ಡಿಸೆಂಬರ್ 12ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

Comments are closed.