
ಮುಂಬಯಿ: ಮಹಾರಾಷ್ಟ್ರ ರಾಜಕೀಯ ಬೃಹನ್ನಾಟಕದ ಪ್ರಮುಖ ಪಾತ್ರಧಾರಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತೆ ಸಂಪುಟ ಸೇರಲಿದ್ದಾರೆ. ಅವರಿಗೆ ಉದ್ಧವ್ ಠಾಕ್ರೆ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸಿಗಲಿದೆ. ಈ ಹಿಂದೆ ಬಿಜೆಪಿ ಜೊತೆ ಕೈ ಜೋಡಿಸಿ ಅವರು ಸಣ್ಣ ಅವಧಿಗೆ ಉಪಮುಖ್ಯಮಂತ್ರಿಯಾಗಿದ್ದರು.
ಡಿಸೆಂಬರ್ 30ರ ಮಧ್ಯಾಹ್ನ 1 ಗಂಟೆಗೆ ಸಂಪುಟ ವಿಸ್ತರಣೆ ನಡೆಯಲಿದೆ. ಅವರ ಜೊತೆಗೆ ಶಿವಸೇನೆಯ ಸುನಿಲ್ ಪ್ರಭು, ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಕೂಡ ಸಂಪುಟ ಸೇರಲಿದ್ದಾರೆ. ಒಟ್ಟು ಸುಮಾರು ಎರಡು ಡಜನ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎನ್‌ಸಿಪಿಗೆ ಈ ಮೊದಲೇ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿತ್ತು. ಆದರೆ ಇದನ್ನು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಖಾಲಿ ಬಿಟ್ಟಿದ್ದರು. ಇದೀಗ ಆ ಸ್ಥಾನಕ್ಕೆ ಅಜಿತ್ ಪವಾರ್ ಬರಲಿದ್ದಾರೆ. ಇವರೊಂದಿಗೆ ಎನ್‌ಸಿಪಿ ಕೋಟಾದಲ್ಲಿ ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ತತ್ಕಾರೆ, ರಾಜೇಂದ್ರ ಶಿಂಗ್ಣೆ, ರಾಜೇಶ್ ಟೋಪ್ ಮತ್ತು ಮಾಣಿಕ್ ಕೋಕಟ್ ಸಂಪುಟ ಸೇರಲಿದ್ದಾರೆ.
ಕಾಂಗ್ರೆಸ್‌ಗೆ ಸ್ಪೀಕರ್ ಹುದ್ದೆಯ ಜೊತೆಗೆ 13 ಸಚಿವ ಸ್ಥಾನವನ್ನು ನೀಡಲಾಗಿದೆ. ಇದರಲ್ಲಿ ಈಗಾಗಲೇ ಬಾಳಾಸಾಹೇಬ್ ಥೋರಟ್ ಮತ್ತು ನಿತಿನ್ ರಾವತ್ ಸಂಪುಟ ಸೇರಿದ್ದು, ಅಶೋಕ್ ಚವಾಣ್, ಅಮಿತ್ ದೇಶ್‌ಮುಖ್ ಇದೀಗ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನುಳಿದ ಸಚಿವರ ಹೆಸರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮಗೊಳಿಸಬೇಕಿದೆ,
ಹಾಗೆ ನೋಡಿದರೆ ಮಂಗಳವಾರವೇ ಸಂಪುಟ ವಿಸ್ತರಣೆ ನಡೆಯಬೇಕಾಗಿತ್ತು. ಆದರೆ ಕಾಂಗ್ರೆಸ್ ತನ್ನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸದ ಹಿನ್ನೆಲೆಯಲ್ಲಿ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆಯಾಗಿದೆ.
ಶಿವಸೇನೆಯಿಂದ ಪ್ರಕಾಶ್ ಅಬಿಟ್ಕರ್, ಗುಲಾಬ್ ಪಾಟಿಲ್, ದಾದಾ ಭಿಸೆ, ಉದಯ್ ಸಾಮಂತ್, ಬಚ್ಚು ಕಡು, ಸಂಜಯ್ ರಾಥೋಡ್ ಮತ್ತು ಅಬ್ದುಲ್ ಸತ್ತಾರ್ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರಕಾರದಲ್ಲಿ ಸಚಿವರಾಗಲಿದ್ದಾರೆ.
Comments are closed.