ಕರ್ನಾಟಕ

ಮೊಬೈಲ್ ಕೊಡದ ಅಕ್ಕ- ವಿಷ ಸೇವಿಸಿ ತಮ್ಮ ಆತ್ಮಹತ್ಯೆ

Pinterest LinkedIn Tumblr


ಚಿಕ್ಕಬಳ್ಳಾಪುರ: ಮೊಬೈಲ್ ಗೀಳಿಗೆ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಂಡ್ಯಂಪಲ್ಲಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಯಶ್ವಂತ್ ಮೃತ ವಿದ್ಯಾರ್ಥಿ. ಈತ ಚೇಳೂರು ಗ್ರಾಮದ ಅರವಿಂದ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಶನಿವಾರ ಸಂಜೆ ತನ್ನ ಸಹೋದರಿ ಅಕಿಲಾಳನ್ನ ಮೊಬೈಲ್ ಕೊಡುವಂತೆ ಪೀಡಿಸಿದ್ದಾನೆ. ಆದರೆ ಸಹೋದರಿ ಮೊಬೈಲ್ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯಶ್ವಂತ್ ಅಕ್ಕನ ಜೊತೆ ಜಗಳ ಮಾಡಿ, ಒಂದು ಏಟು ಹೊಡೆದು ಮನೆಯಿಂದ ಜಮೀನು ಕಡೆಗೆ ಹೋಗಿದ್ದಾನೆ.

ಈ ವೇಳೆ ಜಮೀನು ಬಳಿಯಿದ್ದ ಟೊಮೇಟೊ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಯಶ್ವಂತ್‍ನನ್ನ ಸ್ಥಳೀಯ ಚೇಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಯಶ್ವಂತ್ ಮೃತಪಟ್ಟಿದ್ದಾನೆ.

ಮೃತ ಯಶ್ವಂತ್ ಪಬ್‍ಜೀ ಗೇಮ್ ಆಡುವ ಹಾಗೂ ಟಿಕ್‍ಟಾಕ್ ಮಾಡುವ ಖಯ್ಯಾಲಿ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಅತಿಯಾದ ಮೊಬೈಲ್ ಗೀಳಿನಿಂದ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.