ಮುಂಬಯಿ: ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇದು ದಿಲ್ಲಿಯಲ್ಲಿ ಕುಳಿತ ಫಡ್ನವೀಸ್ ಸೂತ್ರದಾರ ಕಪಾಳಮೋಕ್ಷ ಎಂದು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಎನ್‌ಸಿಪಿಯ ಅಜಿತ್ ಪವಾರ್ ರಾಜೀನಾಮೆ ನೀಡಿದ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಅವರು, “ಇದು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಸಂದ ಜಯ. ಕುದುರೆ ವ್ಯಾಪಾರದ ಮೂಲಕ ಅವರು ಸರಕಾರ ರಚನೆ ಮಾಡಬಹುದು ಎಂದುಕೊಂಡಿದ್ದರು. ಇದು ದೇವೇಂದ್ರ ಫಡ್ನವೀಸ್ ವೈಫಲ್ಯ ಮಾತ್ರವಲ್ಲ ದಿಲ್ಲಿಯಲ್ಲಿ ಕುಳಿತ ಅವರ ಸೂತ್ರದಾರರಿಗಿದು ಕಪಾಳಮೋಕ್ಷ,” ಎಂಬುದಾಗಿ ಅವರು ವಿಶ್ಲೇಷಿಸಿದ್ದಾರೆ.
ಇದೇ ವೇಳೆ ಅವರು ‘ಮಹಾ ವಿಕಾಸ್ ಅಘಾಡಿ’ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್) ಮೈತ್ರಿ ಪಕ್ಷಗಳ ಮುಂದಿನ ನಡೆಯನ್ನೂ ಬಿಡಿಸಿಟ್ಟಿದ್ದಾರೆ. ಮಂಗಳವಾರ ಸಂಜೆ ಮೂರೂ ಪಕ್ಷಗಳ ಸಭೆ ಮತ್ತು ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ. ಸಭೆಯಲ್ಲಿ ಜಂಟಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ. ನನ್ನ ಪ್ರಕಾರ ಉದ್ಧವ್ ಠಾಕ್ರೆ ಆಯ್ಕೆಯಾಗಲಿದ್ದಾರೆ ಎಂಬುದಾಗಿ ವೇಣುಗೋಪಾಲ್ ವಿವರಿಸಿದ್ದಾರೆ.
Comments are closed.