ಮುಂಬೈ

ಪಕ್ಷಾಂತರ ಸರಿಯಲ್ಲ: ಶಿವಸೇನಾ ಶಾಸಕರಿಗೆ ಉದ್ಧವ್ ಠಾಕ್ರೆ

Pinterest LinkedIn Tumblr


ಶಿವಸೇನೆಯ 56 ನೂತನ ಶಾಸಕರು ಬೇರೆ ಪಕ್ಷಕ್ಕೆ ಜಿಗಿಯುವುದರ ವಿರುದ್ಧ ಪಕ್ಷದ ವರಿಷ್ಠ ಉದ್ಧವ್‌ ಠಾಕ್ರೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಇಂತಹ ಸಾಹಸಕ್ಕೆ ಮುಂದಾದರೆ, ಅಂತಹ ಶಾಸಕರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಳ್ಳುವ ಅಪಾಯ ಎದುರಿಸಬಹುದೆಂದು ಶನಿವಾರ ನಡೆದ ಸಭೆಯಲ್ಲಿ ಹೇಳಿದ್ದಾರೆ.

ಸತಾರಾ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಧಿಯಾಗಿ ಸ್ಪರ್ಧಿಸಿ ಸೋಲುಂಡ ಮಾಜಿ ಎನ್‌ಸಿಪಿ ಸಂಸದ, ಮರಾಠಿ ದೊರೆ ಶಿವಾಜಿ ಮಹಾರಾಜರ ವಂಶಸ್ಥ ಉದಯನ್‌ ರಾಜೇ ಅವರ ಸ್ಥಿತಿಯನ್ನು ಠಾಕ್ರೆ ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಸಿಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ರಾಜೇ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅ.21ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತಾರಾದಿಂದ ಸ್ಪರ್ಧಿಸಿ ಸೋಲು ಕಂಡರು.

”ನಾಲ್ಕೇ ತಿಂಗಳಲ್ಲಿ ರಾಜ-ಮಹಾಧಿರಾಜರೇ ಸೋಲು ಕಂಡಿದ್ದಾರೆ ಎಂದಾದರೆ, ಬೇರೆಯವರ ಪಾಡು ಇನ್ನೇನಾಗಬಹುದು,” ಎಂದು ಠಾಕ್ರೆ ಎಚ್ಚರಿಸಿದ್ದಾರೆ.

ಆತಂಕವೂ ಹೌದು: ಉದ್ಧವ್‌ ಠಾಕ್ರೆ ಅವರ ಈ ಮಾತು ಕೇವಲ ಎಚ್ಚರಿಕೆ ಮಾತ್ರವಲ್ಲದೆ, ಮಿತ್ರ ಪಕ್ಷ ಬಿಜೆಪಿ ಕುರಿತು ಶಿವಸೇನೆಯಲ್ಲಿ ಮನೆಮಾಡಿರುವ ಆತಂಕವನ್ನೂ ಸೂಚಿಸಿದೆ. ಬಿಜೆಪಿ ಕಾರ್ಯಕರ್ತರು ಶಿವಸೇನೆಯ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ15 ಸೇನಾ ಶಾಸಕರು ಹೇಗೆ ಸೋಲು ಅನುಭವಿಸಬೇಕಾಯಿತು ಎಂಬ ಅಂಶವನ್ನೂ ಸಭೆಯಲ್ಲಿ ಒತ್ತಿ ಹೇಳಿದರು. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕಳಚಿಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸಿದ ಬಳಿಕ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಶಿವಸೇನೆಗೆ ಹೇಗೆ ಬೆನ್ನಿಗೆ ಚೂರಿ ಹಾಕಿತು ಎಂಬ ಬಗ್ಗೆ ಠಾಕ್ರೆ ಸಾರ್ವಜನಿಕವಾಗಿ ಆರೋಪಿಸುತ್ತಲೇ ಬಂದಿದ್ದರು. ಶಿವಸೇನೆಯು ಕೇಂದ್ರದಲ್ಲಿಬಿಜೆಪಿ ತನಗಿಂತ ಮೇಲೆಂದೂ, ರಾಜ್ಯದ ವಿಷಯಕ್ಕೆ ಬಂದಾಗ, ಬಿಜೆಪಿಗಿಂತ ತಾನೇ ಮಿಗಿಲೆಂದು ಬಲವಾಗಿ ನಂಬಿದೆ

ಬಿಎಂಸಿ ಆಧಿಪತ್ಯಕ್ಕೆ ಕಸರತ್ತು: ಶಿವಸೇನೆ ತನ್ನ ಭದ್ರಕೋಟೆ ಎಂದು ನಂಬಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ (ಬಿಎಂಸಿ) ನಡೆದ ಚುನಾವಣೆಯಲ್ಲೂಎರಡು ಸ್ಥಾನಗಳ ಅಂತರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಶಿವಸೇನೆ ಬಲ 84, ಬಿಜೆಪಿ 82. ಈ ಅಲ್ಪ ಅಂತರ ಕೂಡ ಸೇನೆಗೆ ಆಘಾತ ನೀಡಿತ್ತು. ಆದರೆ, ಸೇನೆಯ ಪಾಲಿಗೆ ಚುನಾವಣೆಯಿಂದ ಸ್ಪಷ್ಟ ಸಂದೇಶವೊಂದು ದೊರೆತಿತ್ತು. ಶಿವಸೇನೆಯ ಬೆಂಬಲದಿಂದ ಬೆಳೆದ ಕಮಲ, ಆಸರೆಯಾದ ಬಳ್ಳಿಯನ್ನೆ ಕಬಳಿಸುವ ಹಂತಕ್ಕೆ ಬೆಳೆದಿದೆ. ಬಿಜೆಪಿಯನ್ನು ಮಣಿಸದಿದ್ದರೆ, ತಾನು ಮತ್ತಷ್ಟು ಹಿನ್ನೆಲೆಗೆ ಸರಿಯಬಹುದೆಂಬ ಆತಂಕವೂ ಶಿವಸೇನೆಗೆ ಕಾಡತೊಡಗಿತು. 2022ಕ್ಕೆ ಮತ್ತೆ ‘ಬಿಎಂಸಿ’ ಚುನಾವಣೆ ನಡೆಯಲಿದೆ. ಪ್ರಸ್ತುತ ಸೇನೆ ತೋರುತ್ತಿರುವ ‘ಬಲ ಪ್ರದರ್ಶನ’ ಹಾಗೂ ಸಿಎಂ ಹುದ್ದೆಗಾಗಿನ ಪಟ್ಟಿನ ಹಿಂದೆಯೂ ‘ಬಿಎಂಸಿ’ ಮೇಲೆ ಹಿಡಿತ ಮುಂದುವರಿಸುವ ಉದ್ದೇಶ ಅಡಗಿದೆ.

Comments are closed.