ಕರ್ನಾಟಕ

50 ವರ್ಷದ ನಂತರ ಮೃತಪಟ್ಟ ವ್ಯಕ್ತಿ ಪ್ರತ್ಯಕ್ಷ!

Pinterest LinkedIn Tumblr


ಚಿತ್ರದುರ್ಗ: ಮೃತಪಟ್ಟ ವ್ಯಕ್ತಿಯನ್ನು ಮಣ್ಣು ಮಾಡಿ ಐವತ್ತು ವರ್ಷದ ನಂತರ ಪ್ರತ್ಯಕ್ಷವಾದ ಅಚ್ಚರಿಯ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ.

ಐವತ್ತು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದ ವ್ಯಕ್ತಿ ಈರಣ್ಣ (72) ತಿಂಗಳ ಹಿಂದೆ ಗ್ರಾದವರ ಕೈಗೆ ಸಿಕ್ಕಿದ್ದಾರೆ.

ಸಣ್ಣ ಈರಣ್ಣ ಎಂಬ ವ್ಯಕ್ತಿ 50 ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರಂತೆ, ಬಳಿಕ ಮೃತದೇಹವನ್ನು ಮಣ್ಣು ಮಾಡಿದ್ದ ಕುಟುಂಬ, ಮೂರು ದಿನಗಳ ನಂತರ ತಿಥಿ ಕಾರ್ಯಕ್ಕಾಗಿ ಸಮಾಧಿ ಸ್ಥಳಕ್ಕೆ ಹೋದಾಗ ಸಮಾಧಿ ಕೆದರಿದ ಸ್ಥಿತಿಯಲ್ಲಿತ್ತು ಎಂದಿದ್ದಾರೆ. ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಶಾಸ್ತ್ರ ಮುಗಿಸಿ ಮನೆಗೆ ಮರಳಿದ್ದರು.

ಆದರೆ 50 ವರ್ಷಗಳ ಬಳಿಕ ಸಿಕ್ಕಿರುವ ಸಣ್ಣ ಈರಣ್ಣ ತನ್ನಪತ್ನಿಗೆ ಎತ್ತು ಇರಿದು ಹೊಲಿಗೆ ಹಾಕಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈರಮ್ಮ, ಸಹೋದರರಾದ ಬೇವಣ್ಣ, ಅಜ್ಜಪ್ಪ ಹಾಗೂ ಮಕ್ಕಳಾದ ಈರಣ್ಣ, ಮರಿಯಪ್ಪರನ್ನು ಗುರುತಿಸಿದ್ದಾರೆ. ಇದು ಹಲವು ಅಚ್ಚರಿಗೆ ಕಾರಣವಾಗಿದ್ದು, ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಇಷ್ಟು ವರ್ಷಗಳ ಕಾಲ ಆಂಧ್ರಪ್ರದೇಶದ ಅನಂತಪುರ ತಾಲೂಕಿನ ಗುಮ್ಮಗಟ್ಟೆಯಲ್ಲಿ ವಾಸವಿದ್ದ ಸಣ್ಣ ಈರಣ್ಣ, ಕುರಿ ಗೊಬ್ಬರಕ್ಕಾಗಿ ಆಂಧ್ರ ಪ್ರದೇಶಕ್ಕೆ ಹೋಗಿದ್ದಾಗ ಸಂಬಂಧಿಕರಿಗೆ ಸಿಕ್ಕಿದ್ದಾರೆ. ಗುಮ್ಮಗಟ್ಟೆಯಲ್ಲಿ ಜೋಗಿ ಸಮುದಾಯದ ಜತೆ ಈರಣ್ಣ ಇದ್ದರು. ಅಲ್ಲಿಯೇ ಜೋಗಿ ಸಮುದಾಯದ ಅಕ್ಕ-ತಂಗಿಯನ್ನು ಮದುವೆ ಆಗಿದ್ದಾರೆ.

ಮಣ್ಣು ಮಾಡಿದ ವ್ಯಕ್ತಿ ಮತ್ತೆ ಬಂದಿರುವುದು ನಂಬಲು ಅಸಾಧ್ಯವಾದ ವಿಚಾರ. ಈ‌‌‌ ಕಾರಣಕ್ಕೆ ವ್ಯಾಪಕ ಚರ್ಚೆಯಾಗಿದ್ದು, ಮಣ್ಣು ಮಾಡಿದ್ದ ವ್ಯಕ್ತಿ ಇವರೇನಾ ಅಥವಾ ಈಗ ಸಿಕ್ಕಿದ ವ್ಯಕ್ತಿ ಈರಣ್ಣನಾ ಎಂಬ ಜಿಜ್ಞಾಸೆ ಶುರುವಾಗಿದೆ. ಎಲ್ಲದಕ್ಕೂ ಡಿಎನ್ಎ ಪರೀಕ್ಷೆ ಮಾತ್ರ ಉತ್ತರ‌ ನೀಡಬಹುದು ಎನ್ನುತ್ತಾರೆ ತಜ್ಞರು.

ಕಳೆದೊಂದು ತಿಂಗಳಿಂದ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ಇದೇ ಚರ್ಚೆ ನಡೆಯುತ್ತಿದ್ದು ಈಗ ಮಾಧ್ಯಮಗಳ ಮೂಲಕ ಮತ್ತೆ ಸುದ್ದಿಯಾಗುತ್ತಿದೆ.

Comments are closed.