ಮುಂಬೈ

ಹಸುಗಳು ಮಾತ್ರ ಜನಿಸುವ ವೀರ್ಯಾಣುಗಳ ಸಂಶೋಧನೆ; ಗಿರಿರಾಜ್ ಸಿಂಗ್!

Pinterest LinkedIn Tumblr


ಮುಂಬೈ (ಸೆಪ್ಟೆಂಬರ್.01); ಭವಿಷ್ಯದಲ್ಲಿ ಕೇವಲ ಹಸುಗಳು ಮಾತ್ರ ಜನಿಸುವಂತಹ ವೀರ್ಯಾಣುಗಳನ್ನು ಆಯ್ಕೆ ಮಾಡಿ ದನಗಳಿಗೆ ಗರ್ಭಧಾರಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು, ಈ ಕುರಿತು ಸಂಶೋಧನೆ ಪ್ರಸ್ತುತ ಚಾಲ್ತಿಯಲ್ಲಿದ್ದು ಶೀಘ್ರದಲ್ಲಿ ಕ್ಷೀರ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಯಾಗಲಿದೆ ಎಂದು ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ನಾಗಪುರದಲ್ಲಿ ಇಂದು ಹಾಲು ಉತ್ಪಾದಕ ‘ಮದರ್ ಡೈರಿ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭವಿಷ್ಯದ ದಿನಗಳಲ್ಲಿ ಕರು ಜನಿಸುವ ಮುಂಚಿತವಾಗಿಯೇ ಅದರ ಲಿಂಗವನ್ನು ಧೃಡಪಡಿಸಲಾಗುತ್ತದೆ. ವೀರ್ಯಾಣುಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳ ಜನನಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯಯೋಜನೆ ರೂಪಿಸಿದೆ. ಈ ಮೂಲಕ ರೈತರ ಆದಾಯ ಎರಡು ಪಟ್ಟು ಹೆಚ್ಚಾಗಲಿದೆ. ಹೀಗಾಗಿ 2019-20 ರಲ್ಲಿ ಹುಟ್ಟುವ ಕರುವಿನ ಲಿಂಗವನ್ನು ಮುಂಚಿತವಾಗಿಯೇ ಧೃಡಪಡಿಸಲು ಸುಮಾರು 30 ಲಕ್ಷಕ್ಕೂ ಅಧಿಕ ವೀರ್ಯಾಣುಗಳನ್ನು ಜಾನುವಾರುಗಳಿಗೆ ಗರ್ಭಧಾರಣೆ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

2025ರ ವೇಳೆಗೆ 10 ಕೋಟಿ ವೀರ್ಯಾಣುಗಳನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಅದು 10 ಕೋಟಿ ಹಸುಗಳ ಹುಟ್ಟಿಗೆ ಕಾರಣವಾಗಲಿದೆ. ಆ ಮೂಲಕ ನಾವು ದೇಶದಲ್ಲಿ ಹಸುಗಳನ್ನು ಉತ್ಪಾದಿಸುವ ಕಾರ್ಖಾನೆಯನ್ನು ನಿರ್ಮಿಸಲಿದ್ದೇವೆ, ದೇಶದಾದ್ಯಂತ ಅಧಿಕ ಸಂಖ್ಯೆಯಲ್ಲಿ ಹಸುಗಳ ಉತ್ಪಾದನೆಯಾಗಲಿದೆ. ಇದಲ್ಲದೆ ಹಾಲು ಉತ್ಪಾದನೆಯಲ್ಲೂ ಗಣನೀಯ ಸಾಧನೆಯಾಗಲಿದೆ. ಹೊಸ ತಂತ್ರಜ್ಞಾನದ ಮೂಲಕ ಹಸುಗಳು 20 ಲೀಟರ್ ವರೆಗೆ ಹಾಲು ಉತ್ಪಾದನೆ ಮಾಡಲಿವೆ.ಇದು ಸಾಧ್ಯವಾದರೆ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ದೊಡ್ಡ ಕ್ರಾಂತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Comments are closed.