ರಾಷ್ಟ್ರೀಯ

ಅಯೋಧ್ಯಾ: ಇಸ್ಲಾಂ ಕಕ್ಷೀಧಾರರ ಪರ ವಕಾಲತ್ತು ವಹಿಸದಂತೆ ಜೀವ ಬೆದರಿಕೆ; ಸುಪ್ರೀಂ ​ನಲ್ಲಿ ದಾಖಲಾದ ಪ್ರಕರಣ

Pinterest LinkedIn Tumblr


ನವ ದೆಹಲಿ (ಸೆಪ್ಟೆಂಬರ್​.01); ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಂ ಕಕ್ಷೀಧಾರರ ಪರ ವಕಾಲತ್ತು ವಹಿಸಬಾರದು ಎಂದು ಚೆನ್ನೈ ನಿವಾಸಿಯಾಗಿರುವ ಪ್ರಾಧ್ಯಾಪಕ ಶಣ್ಮುಗಂ ಎನ್ನುವವರು ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ರಾಜೀವ್ ಧವನ್ ದೂರು ದಾಖಲಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ಅಯೋಧ್ಯಾ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, 2010ರಲ್ಲಿ ಈ ಪ್ರಕರಣ ಸಂಬಂಧ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್ ರಾಮಜನ್ಮ ಭೂಮಿ ಎಂದು ನಂಬಲಾಗುವ ಅಯೋಧ್ಯೆಯ ಭೂಮಿಯನ್ನು ಹಿಂದು ಸಂಘಟನೆ, ಮುಸ್ಲಿಂ ಸಂಘಟನೆ ಹಾಗೂ ನಿರ್ಮೋಹಿ ಅಖಾರಕ್ಕೆ ಸರಿಸಮಾನವಾಗಿ ಪಾಲು ಮಾಡಿ ತೀರ್ಪು ನೀಡಿತ್ತು.

ಆದರೆ, ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹಿಂದೂ-ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ಈ ಪ್ರರಕಣ ಸುಪ್ರೀಂ ಅಂಗಳದಲ್ಲಿದೆ. ಈ ಕುರಿತು ಪ್ರತಿದಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ರಾಜೀವ್ ಧವನ್ ಇಸ್ಲಾಂ ಕಕ್ಷೀಧಾರರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ. ಆದರೆ, ಅವರು ಇಸ್ಲಾಂ ಸಮುದಾಯದವರ ಪರ ವಾದ ಮಂಡಿಸಬಾರದು ಎಂದು ಚೆನ್ನೈನ ಶಣ್ಮುಗಂ ಪತ್ರ ಬರೆದು ಅವರನ್ನು ಬೆದರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

“ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಕ್ಕೆ ಸಂಬಂಧ ಹೀಗೆ ಪತ್ರದ ಮುಖೇನ ಬೆದರಿಕೆ ಒಡ್ಡುವುದು ಅಪರಾಧ ಹಾಗೂ ನ್ಯಾಯಾಂಗ ನಿಂದನೆಯಾಗಿದ್ದು, ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಜೀವ ಬೆದರಿಕೆ ಒಡ್ಡಿದವರಿಗೆ ತಕ್ಕ ಶಿಕ್ಷೆ ನೀಡಬೇಕು” ಎಂದು ರಾಜೀವ್ ಧವನ್ ಸುಪ್ರೀಂ ಇದೀಗ ಕೋರ್ಟ್​ಗೆ ದೂರು ಸಲ್ಲಿಸಿದ್ದಾರೆ.

Comments are closed.