
ಮುಂಬೈ: ತನ್ನ ಕೈಯಿಂದಲೇ ಚಿರತೆಯ ದವಡೆಗೆ ಹೊಡೆದು 18 ತಿಂಗಳ ಮಗನನ್ನು ಭಾರೀ ಅನಾಹುತದಿಂದ ತಾಯಿ ಪಾರು ಮಾಡಿದ ಘಟನೆ ಮಹಾರಾಷ್ಟ್ರದ ಜುನ್ನರ್ ತಾಲೂಕಿನಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ.
ಧ್ನ್ಯಾನೇಶ್ವರ್ ಮಲಿ ಅಪಾಯದಿಂದ ಪಾರಾದ ಬಾಲಕನಾಗಿದ್ದು, ಮಗನನ್ನು ಪಾರು ಮಾಡುತ್ತಿದ್ದಂತೆಯೆ ಚಿರತೆ ಆತನ ತಾಯಿ ಮೇಲೂ ದಾಳಿ ಮಾಡಿದೆ.
ಚಿರತೆಯ ಬಾಯಿಯಿಂದ 18 ತಿಂಗಳ ಮಗುವನ್ನು ರಕ್ಷಿಸಿಕೊಳ್ಳುವಲ್ಲಿ ಜುನ್ನಾರ್ ಪ್ರದೇಶದ ತಾಯಿ ಯಶಸ್ವಿಯಾಗಿದ್ದಾರೆ. ತನ್ನ ಮುಷ್ಠಿಯಿಂದಲೇ ಚಿರತೆಯನ್ನು ಗುದ್ದಿ ಓಡಿಸುವ ಮೂಲಕ ಸಾವಿನ ದವಡೆಯಿಂದ ಮಗುವನ್ನು ರಕ್ಷಿಸಿಕೊಂಡಿದ್ದಾರೆ.
ಜುನ್ನಾರ್ ಪ್ರದೇಶದ ಧೋಲ್ವಾಡ್ ಗ್ರಾಮದಲ್ಲಿ 20 ವರ್ಷದ ದೀಪಾಲಿ ಮಗು ಮತ್ತು ಗಂಡನ ಜತೆ ತಮ್ಮ ಗುಡಿಸಲಿನಿಂದ ಹೊರಗಡೆ ಮಲಗಿದ್ದರು. ರಾತ್ರಿ ಸುಮಾರು 1.30ಕ್ಕೆ ಚಿರತೆಯೊಂದು ಮಗುವನ್ನು ಹೊತ್ತೊಯ್ಯಲು ಯತ್ನಿಸಿದೆ. ಚಿರತೆಯ ದಾಳಿಯಿಂದ ಎಚ್ಚರಗೊಂಡ ದೀಪಾಲಿ ತನ್ನ ಮಗುವಿನ ತಲೆಯನ್ನು ಚಿರತೆ ಕಚ್ಚಿಕೊಂಡಿರುವುದನ್ನು ಗಮನಿಸಿದ್ದಾರೆ. ಹೆದರದೆ ತನ್ನ ಮಗುವಿನ ರಕ್ಷಣೆಗಾಗಿ ಧೈರ್ಯ ತೋರಿದ ದೀಪಾಲಿ, ತನ್ನ ಮುಷ್ಠಿಯಿಂದ ಚಿರತೆಗೆ ಗುದ್ದಿದ್ದಾರೆ. ಏಟಿಗೆ ತತ್ತರಿಸಿದ ಚಿರತೆ ಮಗುವನ್ನು ಬಿಟ್ಟು ದೀಪಾಲಿ ಮೇಲೆ ದಾಳಿ ಮಾಡಲು ಮುಂದಾಗಿದೆ. ಇದೇ ವೇಳೆ ಅಕ್ಕಪಕ್ಕದಲ್ಲಿದ್ದವರನ್ನು ಕೂಗಿ ಕರೆದಿದ್ದರಿಂದ ಹೆದರಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಚಿರತೆ ದಾಳಿಯಿಂದ ಗಾಯಗೊಂಡಿರುವ ಮಗು ದ್ಯಾನೇಶ್ವರ್ನನ್ನು ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಿಡುಗಡೆ ಮಾಡಿರುವುದಾಗಿ ಅಲ್ಲಿನ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದೆವಾಡಿ ಪ್ರದೇಶದ ಧೋಲ್ವಾಡ್ ಗ್ರಾಮದ ನಿವಾಸಿಗಳಾದ ದೀಪಾಲಿ ಕುಟುಂಬ ಕಬ್ಬು ಕಟಾವು ಕೆಲಸಗಾರರಾಗಿದ್ದಾರೆ. ಈ ಪ್ರದೇಶದಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿದ ಎರಡನೇ ಘಟನೆಯಾಗಿದೆ. ಜನವರಿ ತಿಂಗಳಲ್ಲಿ 5 ವರ್ಷದ ಹೆಣ್ಣು ಮಗುವನ್ನು ಚಿರತೆಯೊಂದು ಕೊಂದು ಹಾಕಿತ್ತು.
Comments are closed.