
ಮುಂಬೈ: ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ಮೂಲದ ಎಂಟು ತಿಂಗಳ ಗರ್ಭಿಣಿಯೊಬ್ಬರ ಮೇಲೆ ಎಂಟು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಧಾರುಣ ಘಟನೆ ಸಾಂಗ್ಲಿಯಲ್ಲಿ ನಡೆದಿದೆ. ಘಟನೆ ಸಂಬಂಧ ಮಹಾರಾಷ್ಟ್ರ ಮಹಿಳಾ ಸಮಿತಿ ಸೇರಿ ರಾಜಕೀಯ ಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸಾಂಗ್ಲಿ ಜಿಲ್ಲೆಯ ತಾಸ್ಗನ್ನ ತುರುಚಿ ಪಾಟಾದಲ್ಲಿ ಪತಿಯೊಂದಿಗೆ ಹೊಟೇಲ್ ನಡೆಸುತ್ತಿದ್ದ 20 ವರ್ಷದ ಮಹಿಳೆ ಮೇಲೆ ಮಂಗಳವಾರ ಈ ಘಟನೆ ನಡೆದಿದೆ.
ತಾಸ್ಗನ್ ಪೊಲೀಸ್ ಠಾಣೆ ಅಧಿಕಾರಿಗಳು ಹೇಳುವ ಪ್ರಕಾರ, “ದಂಪತಿಯು ತಮ್ಮ ಹೋಟೆಲ್ ಕೆಲಸಕ್ಕೆ ಇಬ್ಬರನ್ನು ನೇಮಿಸಿಕೊಳ್ಳಲು ಮುಂದಾಗಿತ್ತು. ಇದೇ ವೇಳೆ ಆರೋಪಿಗಳಲ್ಲಿ ಒಬ್ಬನಾದ ಮುಕುಂದ್ ಮಾನೆ ಕರೆ ಮಾಡಿ, ಇಬ್ಬರು ಕೆಲಸ ಮಾಡಲು ಸಿದ್ಧರಿದ್ದಾರೆ ಅವರಿಗೆ ಮುಂಗಡವಾಗಿ 20 ಸಾವಿರ ರೂಪಾಯಿ ನೀಡಬೇಕು ಎಂದು ಕೇಳಿದ್ದ. ಇದಕ್ಕೆ ಒಪ್ಪಿಕೊಂಡಿದ್ದ ದಂಪತಿಗಳು ಮಾನೆ ಹೇಳಿದ್ದ ಸ್ಥಳಕ್ಕೆ ಹಣ ನೀಡಲು ತೆರಳಿದ್ದರು. ಆ ವೇಳೆ ಮುಕುಂದ್ ಮಾನೆ ಮತ್ತು ಆತನ ಸಹಚರರು ದಂಪತಿ ಮೇಲೆ ಎರಗಿ ಪೈಪ್ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ಅವರ ಬಳಿಯಿದ್ದ ಹಣ ಮತ್ತು ಚಿನ್ನವನ್ನು ಕಿತ್ತುಕೊಂಡು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರದಲ್ಲಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸದಂತೆ ದಂಪತಿಗೆ ಬೆದರಿಕೆಯನ್ನೂ ಹಾಕಿದ್ದಾರೆ”
ಆನಂತರದಲ್ಲಿ ದಂಪತಿ ತಾಸ್ಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ ಸಂತ್ರಸ್ತ ಮಹಿಳೆ ಮಾನೆ, ಸಾಗರ್, ಜಾವೇದ್ ಖಾನ್ ಹಾಗೂ ವಿನೋದ್ ಎಂಬುವವರ ಹೆಸರನ್ನು ತಿಳಿಸಿದ್ದರು. ಘಟನೆ ನಡೆದ 48 ಗಂಟೆಗಳ ನಂತರ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ವರದಿ ನೀಡುವಂತೆ ಎಸ್ಪಿಗೆ ಮಹಿಳಾ ಆಯೋಗ ಪತ್ರ
ಘಟನೆ ಸಂಬಂಧ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಅವರು ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣ ಸಂಬಂಧ ಸಮಗ್ರ ವರದಿ ನೀಡುವಂತೆ ತಿಳಿಸಿದ್ದಾರೆ.
ವಿರೋಧ ಪಕ್ಷವಾದ ಕಾಂಗ್ರೆಸ್ನ ನಾಯಕಿ ಚಿತ್ರಾ ವಾಘ್ ಅವರು ‘ಈ ಘಟನೆ ಮಾನವಿಯತೆಯ ಕಗ್ಗೊಲೆ’ ಎಂದು ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸರ್ಕಾರ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಗ್ರಹಿಸುವಲ್ಲಿ ವಿಫಲವಾಗಿದೆ,” ಎಂದು ಕಿಡಿಕಾರಿದ್ದಾರೆ.
ಘಟನೆ ಖಂಡಿಸಿದ ಶಿವಸೇನೆ ಮುಖಂಡೆ
ಆಡಳಿತ ಪಕ್ಷ ಮಿತ್ರ ಪಕ್ಷವಾದ ಶಿವಸೇನೆಯ ಹಿರಿಯ ಮುಖಂಡರಾದ ನೀಲಂ ಗೋರ್ತೆ ಅವರು ಕೂಡ ಘಟನೆಯನ್ನು ವ್ಯಾಪಕವಾಗಿ ಖಂಡಿಸಿದ್ದು, “ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸುವಂತೆ ಮುಖ್ಯಮಂತ್ರಿ ಫಡ್ನವೀಸ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.
“ದೂರನ್ನು ಹಿಂಪಡೆಯುವಂತೆ ಸಂತ್ರಸ್ತ ಮಹಿಳೆ ಮತ್ತು ಆಕೆ ಕುಟುಂಬಕ್ಕೆ ಒತ್ತಡ ಹಾಕಲಾಗುತ್ತಿದೆ. ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಾಂಗ್ಲಿಯಿಂದ ಸಾತಾರಾಗೆ ವರ್ಗಾವಣೆ ಮಾಡಬೇಕು,” ಎಂದು ಗೋರ್ತೆ ಅವರು ಆಗ್ರಹಿಸಿದ್ದಾರೆ. ಅಲ್ಲದೇ ಈ ಪ್ರಕರಣ ಸೂಕ್ಷ್ಮವಾಗಿರುವುದರಿಂದ ಮಹಿಳೆಯ ಹಳ್ಳಿ ಹಾಗೂ ಪೂರ್ವಾಪರ ಪರಿಚಯವನ್ನು ನೀಡದಂತೆ ಮಾಧ್ಯಮದವರಿಗೆ ಮನವಿ ಮಾಡಿದ್ದಾರೆ.
Comments are closed.