ಮುಂಬೈ

ಮದುವೆ ಭರವಸೆಯಿತ್ತು ಟೆಕ್ಕಿಯಿಂದ 22.54 ಲಕ್ಷ ವಂಚನೆ

Pinterest LinkedIn Tumblr


ಪುಣೆ: ಮ್ಯಾಟ್ರಿಮೊನಿಯಲ್‌ ಸೈಟ್‌ ಮೂಲಕ ಪರಿಚಯವಾಗಿ ನಯವಾದ ಮಾತುಗಳಿಂದ ಮಹಿಳಾ ಟೆಕ್ಕಿಯೊಬ್ಬರನ್ನು ಬುಟ್ಟಿಗೆ ಹಾಕಿಕೊಂಡ ಭೂಪನೊಬ್ಬ ಆಕೆಯಿಂದ 22.54 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದಾನೆ.

ನಯವಾದ ಮಾತುಗಳನ್ನೇ ಬಂಡವಾಳವಾಗಿಸಿಕೊಂಡು ಟೆಕ್ಕಿ ಜತೆ ಸಲುಗೆ ಬೆಳೆಸಿದ್ದ ಆರೋಪಿಯು, ತಾನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕೈಲಿ ಸಿಕ್ಕಿಹಾಕಿಕೊಂಡಿದ್ದೇನೆ. ಹೊರ ಬರಲು ಹಣ ಬೇಕಿದೆ ಎಂದು ಆಕೆಗೆ ಕರೆ ಮಾಡಿಸಿದ್ದ. ಆಗ ಟೆಕ್ಕಿಯು ತನ್ನೆಲ್ಲ ಉಳಿತಾಯದ ಹಣದ ಜತೆಗೆ ಸ್ನೇಹಿತರಿಂದ ಹಣ ಪಡೆದು 22.54 ಲಕ್ಷ ರೂ. ಆರೋಪಿಗೆ ನೀಡಿದ್ದಾರೆ.

ಅದಾದ ಬಳಿಕ ಟೆಕ್ಕಿ ಮಾಡುವ ಕರೆಗಳಿಗೆ ಆತ ಪ್ರತಿಕ್ರಿಯಿಸುತ್ತಿರಲಿಲ್ಲ. ಆಕೆಗೆ ತಾನು ವಂಚನೆಗೆ ಒಳಗಾಗಿರುವ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ರವೆತ್‌ ನಿವಾಸಿಯಾಗಿರುವ ಟೆಕ್ಕಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು,ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿದ್ದರು. ಇದನ್ನು ಗಮನಿಸಿದ್ದ ಆರೋಪಿ ಲಂಡನ್‌ನಲ್ಲಿ ವಾಸವಿರುವ ವೈದ್ಯ ಎಂದು ಪರಿಚಯಿಸಿಕೊಂಡು ಮದುವೆ ಪ್ರಸ್ತಾಪವಿಟ್ಟಿದ್ದ. ಇಬ್ಬರೂ ಸ್ನೇಹದಿಂದ ಇದ್ದರು. ಆರೋಪಿಯು ಆಕೆಯ ಹೆಸರು ಮತ್ತು ಮೊಬೈಲ್‌ ನಂಬರ್‌ ಅನ್ನು ಇತರ ಇಬ್ಬರು ಮಹಿಳೆಯರಿಗೂ ನೀಡಿದ್ದ. ಅವರೂ ಕೂಡ ಟೆಕ್ಕಿ ಜತೆ ಸಂಪರ್ಕದಲ್ಲಿದ್ದರು.

ಮದುವೆ ಬಗ್ಗೆ ಮಾತನಾಡಲು ಜುಲೈ 23ರಂದು ಭಾರತಕ್ಕೆ ಬರುತ್ತಿದ್ದೇನೆ ಎಂದು ಆರೋಪಿ ಟೆಕ್ಕಿಗೆ ತಿಳಿಸಿದ್ದ. ಅದೇ ದಿನ ಮುಂಬಯಿ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿ ಎಂದು ಹೇಳಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ನಿಮ್ಮ ವುಡ್‌ಬಿ ಲಂಡನ್‌ನಿಂದ ಅಕ್ರಮವಾಗಿ 72,000 ಪೌಂಡ್‌ ತಂದಿದ್ದಾರೆ, ಅವರು ದಂಡ ಕಟ್ಟಿದರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದ. ಸ್ವಲ್ಪ ಹೊತ್ತಿನ ಬಳಿಕ ಆರ್‌ಬಿಐ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಹಣ ಪಾವತಿಸಬೇಕಾಗಿರುವ ಬ್ಯಾಂಕ್‌ ಖಾತೆ ನಂಬರ್‌ ಹೇಳಿದ್ದಾನೆ. ಅದರಂತೆ ಟೆಕ್ಕಿ ಆ ಖಾತೆಗೆ ಹಣ ತುಂಬಿದ್ದಾರೆ.

ನಾಲ್ಕು ದಿನಗಳ ಬಳಿಕ ಆರೋಪಿ ಮತ್ತು ಇತರ ಇಬ್ಬರು ಮಹಿಳೆಯರು ಸಂಪರ್ಕಕ್ಕೆ ಸಿಗದಾಗ ಟೆಕ್ಕಿ ಮುಂಬಯಿ ವಿಮಾನ ನಿಲ್ದಾಣದ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.