ಮುಂಬೈ

ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಸಾಯನಿಕ ದಾಳಿ ಬೆದರಿಕೆ: ಆರೋಪಿ ಬಂಧನ

Pinterest LinkedIn Tumblr


ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುತ್ತೇನೆ ಎಂದು ರಾಷ್ಟ್ರೀಯ ಭದ್ರತಾ ಕಚೇರಿ (ಎನ್‌ಎಸ್‌ಜಿ) ಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದ ಎನ್ನಲಾದ 21 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಖಾಸಗಿ ಭದ್ರತಾ ಸಂಸ್ಥೆಯ ಮಾಜಿ ಸಿಬ್ಬಂದಿ ಎಂದು ತಿಳಿದುಬಂದಿದೆ.

ಕಾಶಿನಾಥ್ ಮಂಡಲ್ (21) ಬಂಧಿತ ಆರೋಪಿ. ಭಯದ ವಾತಾವರಣ ಸೃಷ್ಟಿ ಹಾಗೂ ಕೋಮು ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ನವದೆಹಲಿಯ ಎನ್‌ಎಸ್‌ಜಿ ಕಂಟ್ರೋಲ್ ರೂಮ್‌ಗೆ ಶುಕ್ರವಾರ ಸಂಜೆ 5.30ಕ್ಕೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಹೇಳಿದ್ದ. ಕಾಲರ್ ಐಡಿ ಟ್ರ್ಯಾಕರ್ ಮೂಲಕ ಈ ಕರೆ ಮುಂಬೈ ಮೂಲದ ನಂಬರ್‌ನಿಂದ ಬಂದಿದ್ದೆಂದು ಪತ್ತೆ ಹಚ್ಚಿದ ಎನ್‌ಎಸ್‌ಜಿ ತನ್ನ ಮುಂಬೈ ವಿಭಾಗಕ್ಕೆ ಮತ್ತು ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಕಾರ್ಯಪ್ರವೃತ್ತರಾದ ಪೊಲೀಸರು ಆ ಸಂಖ್ಯೆಯ ಮೊಬೈಲ್ ನಂಬರ್ ಮೇಲೆ ನಿಗಾ ಇಟ್ಟು, ಅದೇ ದಿನ ರಾತ್ರಿ 10.30ರ ಸುಮಾರಿಗೆ ಆರೋಪಿಯನ್ನು ಮುಂಬಯಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲು ಯಶಸ್ವಿಯಾದರು.

ಆರೋಪಿ ಗೂಗಲ್‌ ಮೂಲಕ ಎನ್‌ಎಸ್‌ಜಿ ಕಂಟ್ರೋಲ್ ರೂಮ್‌ನ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಕಾಶಿನಾಥ್ ಮಂಡಲ್ ವಿರುದ್ಧ ಐಪಿಸಿ ಸೆಕ್ಸೆನ್ 505 (1) ಮತ್ತು (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.