ರಾಷ್ಟ್ರೀಯ

ಅಸ್ಸಾಂ ನಾಗರಿಕರ ಪರಿಷ್ಕೃತ ಕರಡು ಬಿಡುಗಡೆ; 40 ಲಕ್ಷ ಮಂದಿ ಭಾರತೀಯರೇ ಅಲ್ಲ!

Pinterest LinkedIn Tumblr


ಗುವಾಹತಿ: ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದು ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಕಳಿಸುವ ಅಸ್ಸಾಂನ ಪರಿಷ್ಕೃತ ರಾಷ್ಟ್ರೀಯ ನಾಗರಿಕರ ರಿಜಿಸ್ಟರ್​ (ಎನ್ಆರ್​ಸಿ) ಕರಡು ಪ್ರತಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಒಟ್ಟು 3.29 ಕೋಟಿ ಮಂದಿಯ ಪೈಕಿ 2.89 ಕೋಟಿ ಮಂದಿಯನ್ನು ಅಸ್ಸಾಂ ನಾಗರಿಕರ ಪಟ್ಟಿಗೆ ಸೇರಿಸಲಾಗಿದೆ.
ಉಳಿದಂತೆ ಸುಮಾರು 40 ಲಕ್ಷ ಮಂದಿ ಅಸ್ಸಾಂ ನಾಗರಿಕರಲ್ಲ ಎಂದು ಎನ್ ಆರ್ ಸಿ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿದ ಎನ್ ಆರ್ ಸಿ ಅಸ್ಸಾಂ ಸಂಯೋಜಕ ಅಧಿಕಾರಿ ಪ್ರತೀಕ್ ಹಲೇಜಾ ಅವರು, ಎನ್ಆರ್​ಸಿಯನ್ನು ಪರಿಷ್ಕರಿಸಲಾಗಿದ್ದು, ಒಟ್ಟು 3.29 ಕೋಟಿ ಮಂದಿಯ ಪೈಕಿ 2.89 ಕೋಟಿ ಮಂದಿಯನ್ನು ನಾಗರಿಕರ ಪಟ್ಟಿಗೆ ಸೇರಿಸಲಾಗಿದೆ. ಉಳಿದ ಸುಮಾರು 40 ಲಕ್ಷ ಮಂದಿಯನ್ನು ನಾಗರಿಕರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಹೇಳಿದರು.
‘ಒಟ್ಟು 3,29,91,385 ಅರ್ಜಿದಾರರ ಪೈಕಿ 2,89,83,677 ಅರ್ಜಿದಾರರು ಮಾತ್ರ ಎನ್ ಆರ್ ಸಿ ಸೇರ್ಪಡೆಗೆ ಅರ್ಹರಾಗಿದ್ದು. ಉಳಿದ 40,07,708 ಮಂದಿಯನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಪ್ರಸ್ತುತ ಈ 40 ಲಕ್ಷ ಮಂದಿಯನ್ನು ಏಕೆ ಕೈ ಬಿಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಇದು ಗೌಪ್ಯತೆಯ ವಿಚಾರವಾಗಿದೆ. ಅಂತೆಯೇ ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿ ಅಂತಿಮವೇನೂ ಅಲ್ಲ. ಪಟ್ಟಿಯಲ್ಲಿ ಹೆಸರಿಲ್ಲದ ಮಾತ್ರಕ್ಕೇ ಆತಂಕಗೊಳ್ಳುವ ಅಗತ್ಯವಿಲ್ಲ. ತಕರಾರು ಇರುವವರು ಅರ್ಜಿ ಹಾಕಿ ಮರು ಪರಿಶೀಲನೆಗೆ ಮನವಿ ಮಾಡಬಹುದು. ಅಂತಿಮ ಪಟ್ಟಿಯನ್ನು 2018ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹಲೇಜಾ ಹೇಳಿದರು.
ಪಟ್ಟಿಯಲ್ಲಿ ಹೆಸರಿಲ್ಲದ ಪ್ರತೀ ವ್ಯಕ್ತಿಗೂ ಪ್ರತ್ಯೇಕವಾಗಿ ಪತ್ರ ಬರೆದು ಮಾಹಿತಿ ನೀಡಲಾಗುತ್ತದೆ. ಪಟ್ಟಿಯಲ್ಲಿ ಹೆಸರಿಲ್ಲದ ಅಸ್ಸಾಂ ಮೂಲದ ಪ್ರಜೆಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರುಗಳನ್ನು ಎನ್ ಆರ್ ಸಿ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಬಹುದು.
ಮಾರ್ಚ್​ 25, 1971ರ ನಂತರ ಬಾಂಗ್ಲಾದೇಶದಿಂದ ಅಸ್ಸಾಂನೊಳಗೆ ಅಕ್ರಮವಾಗಿ ಪ್ರವೇಶಿಸಿರುವವರನ್ನು ವಾಪಸ್ ಕಳಿಹಿಸುವ ಉದ್ದೇಶದಿಂದ ಎನ್​ ಆರ್​ ಸಿಯನ್ನು ಪರಿಷ್ಕರಣೆಗೊಳಿಸಲಾಗಿದೆ. 1951ರ ಎನ್​ಆರ್​ಸಿಯಲ್ಲಿ ನಮೂದಿಸಲಾಗಿದ್ದ ಕುಟುಂಬ ಸದಸ್ಯರೊಂದಿಗೆ ಸಂಬಂಧವಿರುವ ವ್ಯಕ್ತಿಗಳು ಅಥವಾ 1971 ರ ಮಾರ್ಚ್​ 25ರ ವರೆಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವವರನ್ನು ಪರಿಷ್ಕೃತ ಎನ್ ​ಆರ್ ​​ಸಿಯಲ್ಲಿ ಸೇರಿಸಲಾಗುವುದು.

Comments are closed.