ಮುಂಬೈ

ವಿಮಾನದಲ್ಲೇ ಮೊಬೈಲ್‌ ಬಿಟ್ಟು ಹೋದ ಸಿಬ್ಬಂದಿ; ಪ್ರಯಾಣಿಕರಿಗೆ ಬೇಗುದಿ

Pinterest LinkedIn Tumblr


ಮುಂಬಯಿ: ವಿಮಾನ ಸಿಬ್ಬಂದಿಯೊಬ್ಬ ವಿಮಾನದಲ್ಲೇ ಮೊಬೈಲ್‌ ಬಿಟ್ಟು ಹೋಗಿದ್ದರಿಂದ ಉಂಟಾದ ಫಜೀತಿಯಿಂದ ಅಂತಾರಾಷ್ಟ್ರೀಯ ವಿಮಾನ ಎರಡು ಗಂಟೆ ತಡವಾಗಿ ಪ್ರಯಾಣ ಆರಂಭಿಸಿದೆ.

ಏರ್‌ ಇಂಡಿಯಾ ಡ್ರೀಮ್‌ಲೈನರ್‌ ಸುಮಾರು ಎರಡು ಗಂಟೆ ತಡವಾಗಿ ಪ್ರಯಾಣ ಬೆಳೆಸಿದೆ. ಇದು ನಡೆದಿರುವುದು ಕಳೆದ ಮಾರ್ಚ್‌ 18 ರಂದು.

ಏರ್‌ ಇಂಡಿಯಾ ಡ್ರೀಮ್‌ಲೈನರ್‌ ವಿಮಾನ ಲಂಡನ್‌ನಿಂದ ಅಹಮದಾಬಾದ್‌ ತೆರಳಲು ಸಿದ್ಧವಾಗಿತ್ತು. ಆಗ ಪೈಲಟ್‌ ಕಣ್ಣಿಗೆ ಮೊಬೈಲ್ ಫೋನ್ ಕಣ್ಣಿಗೆ ಬಿತ್ತು. ವಿಮಾನದೊಳಗೆ ಕಾರ್ಯ ನಿರ್ವಹಿಸಿದ್ದ ವಿಮಾನ ನಿರ್ವಹಣಾ ಎಂಜಿನಿಯರ್‌ ಇದನ್ನು ಬಿಟ್ಟು ಹೋಗಿದ್ದರು. ಅದನ್ನು ಹಿಂತಿರುಗಿಸಲು ಪೈಲಟ್‌ ಕೆಲವು ಯೋಜನೆ ಮಾಡಿದ್ದು ಎಡವಟ್ಟಿಗೆ ಕಾರಣವಾಯಿತು.

ಪೈಲಟ್‌ ತೆಗೆದುಕೊಂಡ ನಿರ್ಧಾರದಿಂದ ವಿಮಾನ ಎರಡು ಗಂಟೆ ತಡವಾಗಿ ಪ್ರಯಾಣ ಆರಂಭಿಸಿದೆ.

ಆಗಿದ್ದೇನು?

ಪ್ರಯಾಣಿಕರೆಲ್ಲರೂ ವಿಮಾನದಲ್ಲಿ ಕುಳಿತ ನಂತರ ವಿಮಾನ ಟೇಕಾಫ್‌ಗೆ ಸಿದ್ಧತೆ ಮಾಡಿಕೊಂಡಿತು. ಆಗ ಮೊಬೈಲ್‌ ಕಂಡ ಪೈಲಟ್‌ ಅದನ್ನು ಹಿಂತಿರುಗಿಸಲು ಬಯಸಿ, ಅದರಂತೆ ಗ್ರೌಂಡ್‌ ಸಿಬ್ಬಂದಿಗೆ ಕರೆ ಮಾಡಿ ಎಂಜಿನಿಯರ್‌ ಅನ್ನು ವಿಮಾನದ ಕೆಳಗೆ ಬರುವಂತೆ ಹೇಳಿ, ಬಾಗಿಲನ್ನು ತೆಗೆದು ಮೊಬೈಲ್‌ ಬಿಸಾಡುವಂತೆ ಕ್ಯಾಬಿನ್‌ ಸಿಬ್ಬಂದಿಗೆ ಸೂಚನೆ ನೀಡಿದ್ದರು.

ಆ ಸಂದರ್ಭದಲ್ಲಿ ಗ್ರೌಂಡ್‌ ಕ್ಲಿಯರೆನ್ಸ್ ಆಗಿದ್ದ ಕಾರಣ ಒಂದು ದಿಂಬಿನಲ್ಲಿ ಮೊಬೈಲ್ ಇಟ್ಟು ಫೋನ್ ಎಸೆಯುವಂತೆ ಕ್ಯಾಬಿನ್‌ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಪೈಲಟ್. ಈ ಸಂದರ್ಭದಲ್ಲಿ ಆಟೋ ಮೋಡ್‌ನಲ್ಲಿರುವ ಬಾಗಿಲನ್ನು ಮ್ಯಾನ್ಯುಯಲ್‌ ಮೋಡ್‌ಗೆ ಬದಲಿಸಿ ನಂತರ ಮತ್ತೆ ಆಟೋ ಮೋಡ್‌ಗೆ ಹಾಕುವಂತೆಯೂ ಸೂಚಿಸಿರುತ್ತಾರೆ. ಆದರೆ ಗಗನಸಖಿ ಇದನ್ನು ಮರೆತು ಹೋಗಿದ್ದು ಎಲ್ಲ ಎಡವಟ್ಟಿಗೆ ಕಾರಣವಾಯಿತು. ಆರು ಸೆಕೆಂಡುಗಳಲ್ಲಿ ಬಾಗಿಲು ಯಥಾಸ್ಥಿತಿಗೆ ಬರುವ ವ್ಯವಸ್ಥೆ ಈ ವಿಮಾನದಲ್ಲಿದೆ. ಆದರೆ ಆಕೆ ಆಟೋ ಮೋಡ್‌ಗೆ ಹಾಕಲು ಮರೆತು ಹೋದ ಕಾರಣ ಸಮಸ್ಯೆ ಕಾಣಿಸಿಕೊಂಡಿತು.

ನಂತರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿ, ತಂತ್ರಜ್ಞರನ್ನು ಕರೆಸಿ ಬಾಗಿಲನ್ನು ಯಥಾಸ್ಥಿತಿಗೆ ತರುವಂತೆ ಮಾಡಿಸಲಾಯಿತು. ಇದಕ್ಕಾಗಿ ಎರಡು ಗಂಟೆ ಬೇಕಾಯಿತು. ಆ ನಂತರವೇ ವಿಮಾನ ಪ್ರಯಾಣ ಆರಂಭಿಸಿತು. ಒಟ್ಟಾರೆಯಾಗಿ ಮೊಬೈಲ್‌ ಫೋನ್‌ನಿಂದಾದ ಎಡವಟ್ಟಿನಿಂದ ವಿಮಾನ ಎರಡು ಗಂಟೆಗಳ ಕಾಲ ವಿಳಂಬವಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಏರ್‌ ಇಂಡಿಯಾ ವಕ್ತಾರರು, ಈ ಘಟನೆ ಬಗ್ಗೆ ಆಂತರಿಕ ತನಿಖೆ ಕೈಗೊಳ್ಳಲಾಗಿದೆ ಎಂದಷ್ಟೇ ಮಾಹಿತಿ ನೀಡಿದ್ದಾರೆ.

ಮೊಬೈಲ್‌ಗಾಗಿ ತಡವಾಗಿ ಹೊರಟ ಮೊತ್ತ ಮೊದಲ ಪ್ರಕರಣ
ಮೊಬೈಲ್‌ಗಾಗಿ ವಿಮಾನವೊಂದು ತಡವಾದ ಮೊತ್ತ ಮೊದಲ ಪ್ರಕರಣ ಇದಾಗಿದೆ.

Comments are closed.