ಮುಂಬೈ

ಪ್ರತಿಪಕ್ಷಗಳು ನಾಯಿ, ಹಾವು, ಮುಂಗುಸಿ, ಬೆಕ್ಕು: ಅಮಿತ್‌ ಶಾ

Pinterest LinkedIn Tumblr


ಮುಂಬಯಿ: ”2019ರ ಸಾರ್ವತ್ರಿಕ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ದೈತ್ಯ ಪ್ರವಾಹ ಬಂದಾಗ ಕೇವಲ ಆಲದ ಮರ ಮಾತ್ರ ನಿಶ್ಚಲವಾಗಿ ನಿಲ್ಲುತ್ತದೆ. ಹಾವು, ಮುಂಗುಸಿ, ನಾಯಿ, ಬೆಕ್ಕು… ಹೀಗೆ ಎಲ್ಲಾ ಪ್ರಾಣಿಗಳು ಏರುತ್ತಿರುವ ನೀರಿನಿಂದ ರಕ್ಷಿಸಿಕೊಳ್ಳಲು ಆಲದ ಮರ ಹತ್ತುತ್ತವೆ. ಮೋದಿ ಪ್ರವಾಹದಿಂದಾಗಿ ಈಗ ಎಲ್ಲಾ ನಾಯಿ, ಬೆಕ್ಕು, ಹಾವು, ಮುಂಗುಸಿಗಳೂ ಚುನಾವಣೆ ಎದುರಿಸಲು ಒಗ್ಗಟ್ಟಾಗುತ್ತಿವೆ,”… ಇದು ಕಮಲ ಪಾಳಯದ ವಿರುದ್ಧ ತೃತೀಯ ರಂಗ ಕಟ್ಟಲು ಟಿಡಿಪಿ, ಟಿಆರ್‌ಎಸ್‌, ಟಿಎಂಸಿ ಮೊದಲಾದ ಪಕ್ಷಗಳು ನಡೆಸುತ್ತಿರುವ ಕಸರತ್ತನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವರ್ಣಿಸಿದ ಪರಿ.

ಶುಕ್ರವಾರ ಇಲ್ಲಿ ನಡೆದ ಬಿಜೆಪಿಯ 38ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿ ಮುಜುಗರಕ್ಕೆ ಸಿಲುಕಿದರು. ನಂತರ ಈ ಬಗ್ಗೆ ಸಮಜಾಯಿಷಿ ನೀಡಿದ ಅವರು, ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸುವ ಉದ್ದೇಶವಿಲ್ಲ ಎಂದರು.

”ಸೈದ್ಧಾಂತಿಕವಾಗಿ ಸಮಾನತೆ ಹೊಂದಿರದ ಪಕ್ಷಗಳು ಮೋದಿ ಕುರಿತಾದ ಭೀತಿಯಿಂದ ಒಂದಾಗುತ್ತಿವೆ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು,” ಎಂದು ಶಾ ಸ್ಪಷ್ಟನೆ ನೀಡಿದರು.

ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಅಚಲ ವಿಶ್ವಾಸ ವ್ಯಕ್ತಪಡಿಸಿದರು. ”ಸುಳ್ಳು ಭರವಸೆ ನೀಡುವ ಬದಲಿಗೆ, ಮೋದಿ ಸರಕಾರ ಮಾಡಿದ ಕಾರ್ಯದಿಂದಾಗಿ ಈ ಬಾರಿ ಬಿಜೆಪಿಗೆ ಗೆಲುವು ಸಿಗಲಿದೆ,” ಎಂದು ಅವರು ಹೇಳಿದರು. ಬಜೆಟ್‌ ಅವೇಶನದಲ್ಲಿ ಸುಗಮ ಕಲಾಪಕ್ಕೆ ಅವಕಾಶ ನೀಡದಿರುವ ಬಗ್ಗೆಯೂ ಪ್ರತಿಪಕ್ಷಳ ವಿರುದ್ಧ ವಾಗ್ದಾಳಿ ನಡೆಸಿದರು.

ಠೇವಣಿ ಕಳೆದುಕೊಂಡು ಸಿಹಿ ಹಂಚಿದರು

”ಉತ್ತರ ಪ್ರದೇಶದಲ್ಲಿ ಎರಡು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಾಗ ರಾಹುಲ್‌ ಬಾಬಾ ಸಿಹಿ ಹಂಚಿದರು. ಆದರೆ, ನಾವು ಚುನಾವಣೆಯನ್ನು ಮಾತ್ರ ಸೋತಿದ್ದೇವೆ. ಆದರೆ, ಅವರ ಪಕ್ಷವು ಠೇವಣೆಯನ್ನೂ ಕಳೆದುಕೊಂಡಿದೆ. ಪಕ್ಷವು ಠೇವಣಿ ಕಳೆದುಕೊಂಡಿದ್ದಕ್ಕಾಗಿ ಸಿಹಿ ಹಂಚಿದ ಮೊದಲ ನಾಯಕನನ್ನು ನಾನು ನೋಡಿದ್ದ ಅವರನ್ನೇ (ರಾಹುಲ್‌),” ಎಂದು ಶಾ ಕುಟುಕಿದರು. ”ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಫೂಲ್ಪುರ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಕಳೆದುಕೊಂಡರೂ, ಮೋದಿ ನಾಯಕತ್ವದಲ್ಲಿ ನಾವು ಕಾಂಗ್ರೆಸ್‌ನಿಂದ 11 ಸರಕಾರಗಳನ್ನೇ ಕಿತ್ತುಕೊಂಡಿದ್ದೇವೆ,” ಎಂದು ಅವರು ಬೆನ್ನು ತಟ್ಟಿಕೊಂಡರು.

ರಾಹುಲ್‌ಗೆ ಇಂಜೆಕ್ಷನ್‌: ”ಇತ್ತೀಚೆಗೆ ರಾಹುಲ್‌ ಗಾಂ ಶರದ್‌ ಪವಾರ್‌ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪವಾರ್‌ ಅವರು ರಾಹುಲ್‌ಗೆ ಯಾವುದೋ ‘ಇಂಜೆಕ್ಷನ್‌’ ಕೊಟ್ಟಿರಬೇಕು ಎಂದು ಲೇವಡಿ ಮಾಡಿದರು.

ಬಿಜೆಪಿ ಸಮಾವೇಶದಿಂದಾಗಿ ಮುಂಬಯಿ ಮಹಾನಗರದಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು. ರೈಲುಗಳ ಸಂಚಾರಕ್ಕೂ ಅಡ್ಡಿ ಎದುರಾಯಿತು.

ರಾಹುಲ್‌ ಗಾಂ, ಶರದ್‌ ಪವಾರ್‌ ಸೇರಿದಂತೆ ಹಲವರು ಎಸ್ಸಿ/ಎಸ್ಟಿ ಮೀಸಲನ್ನು ಬಿಜೆಪಿ ರದ್ದುಪಡಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಕೇಳಿಸಿಕೊಳ್ಳಬೇಕಾದ ಒಂದು ಮಾತೆಂದರೆ, ಬಿಜೆಪಿ ಆ ಕೆಲಸ ಮಾಡುವುದಿಲ್ಲ, ಬೇರೆಯವರು ಮಾಡಲು ಮುಂದಾದರೂ ನಾವು ಬಿಡುವುದಿಲ್ಲ.

– ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಪ್ರತಿಪಕ್ಷಗಳ ‘ಹಿಂಸಾಚಾರ’ಕ್ಕೆ ಕಳವಳ

ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಪ್ರತಿರೋಧ ಇತ್ತೀಚೆಗೆ ಹಿಂಸಾರೂಪ ತಾಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಿಂದುಳಿದ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಿರುವುದು ಮತ್ತು ಬಿಜೆಪಿಯ ಏಳಿಗೆಯನ್ನು ಸಹಿಸದೆ ಪ್ರತಿಪಕ್ಷಗಳು ಈ ರೀತಿ ವರ್ತಿಸುತ್ತಿವೆ ಎಂದರು.

”ಇತ್ತೀಚೆಗೆ ಸರಕಾರದ ವಿರುದ್ಧ ಪ್ರತಿರೋಧ ಮತ್ತು ಕ್ರೋಧ ಹೆಚ್ಚುತ್ತಿದೆ. ಅದೀಗ ಹಿಂಸಾರೂಪವನ್ನೂ ತಾಳುತ್ತಿದೆ. ಸಂಸತ್ತಿನಲ್ಲಿ ರಾಷ್ಟಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡುತ್ತಿದ್ದಾಗ ಪ್ರತಿಪಕ್ಷಗಳ ಸದಸ್ಯರು ಬಹುತೇಕ ನನ್ನನ್ನು ಸುತ್ತುವರಿದಿದ್ದರು. ಸಂಸತ್ತಿನಲ್ಲಿ ಈ ರೀತಿಯ ಪ್ರತಿಭಟನೆ ಎಂದೂ ಕಂಡು ಕೇಳರಿಯದ್ದು,” ಎಂದು ಮೋದಿ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರಿಗೆ ಮೋದಿ ಧನ್ಯವಾದ ಅರ್ಪಿಸಿದರು.

ಮೋದಿ ಕಾಶ್ಮೀರಿಗಳ ಮನ ಗೆಲ್ಲಲು ಸಾಧ್ಯ: ಮುಫ್ತಿ

ಜಮ್ಮು: ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕಾಶ್ಮೀರಿಗಳ ಹೃದಯ, ಮನಸ್ಸು ಮತ್ತು ವಿಶ್ವಾಸ ಗೆಲ್ಲುವುದು ಸಾಧ್ಯ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. 38ನೇ ಸಂಸ್ಥಾಪನಾ ದಿನ ಆಚರಿಸಿದ ಬಿಜೆಪಿಗೆ ಅವರು, ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ.

ಅಮೆರಿಕದಿಂದ ಪರಿಕರ್‌ ಶುಭಾಶಯ

ಮೇದೋಜೀರಕ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿರುವ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌, ಬಿಜೆಪಿಯ ಸಂಸ್ಥಾಪನಾ ದಿನಾಚರಣೆಗೆ ವಿದೇಶದಿಂದಲೇ ಶುಭಾಶಯ ಕೋರಿದ್ದಾರೆ. ”ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ನನ್ನ ಶುಭಾಶಯ,” ಎಂದು ಟ್ವೀಟ್‌ ಮಾಡಿದ್ದಾರೆ.

Comments are closed.