ಮುಂಬೈ

ಮೊಬೈಲ್‌ಗೆ ಕನ್ನ: ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕನಿಗೆ 1.4 ಲಕ್ಷ ಪಂಗನಾಮ

Pinterest LinkedIn Tumblr


ಮುಂಬಯಿ: ಪ್ರಮುಖ ಜಾಹೀರಾತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಮೊಬೈಲ್ ಫೋನ್‌ಗೆ ಕನ್ನ ಹಾಕಿದ ದುಷ್ಕರ್ಮಿಯೊಬ್ಬ, 1.4 ಲಕ್ಷ ರೂಪಾಯಿ ಎಗರಿಸಿದ ಘಟನೆ ವಾಣಿಜ್ಯ ನಗರಿ ಮುಂಬಯಿನಲ್ಲಿ ನಡೆದಿದೆ.

ವರ್ಸೋವಾ ನಿವಾಸಿಯಾಗಿರುವ ಅಭಿಜಿತ್ ದಾಸ್ (38) ವಂಚನೆಗೊಳಗಾದವರು. ಘಟನೆ ಸಂಬಂಧ ಅಭಿಜಿತ್ ದಾಸ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಆದರೆ, ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಮೂರ್ನಾಲ್ಕು ಬಾರಿ ಅಲೆದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ದಾಸ್ ಆರೋಪಿಸಿದ್ದಾರೆ.

ಉಪನಗರ (ಪೂರ್ವ)ದಲ್ಲಿ ಕೆಲಸ ಮಾಡುವ ಕೋಲ್ಕತಾ ಮೂಲದ ದಾಸ್ ಅವರು ಫೆ.26ರ ನಸುಕಿನ ಜಾವ ಎಚ್ಚರವಾದಾಗ ಅಭ್ಯಾಸ ಬಲದಂತೆ ಮೊಬೈಲ್ ಫೋನ್ ಕೈಗೆತ್ತಿಕೊಂಡರು. ಆಗ ಅವರಿಗಾಗಿದ್ದು ಆಘಾತ. ಬ್ಯಾಂಕ್ ಖಾತೆ ಮೂಲಕ ಮಾಡಿದ ವ್ಯವಹಾರಗಳಿಗೆ ಸಂಬಂಧಿಸಿದ ಪಠ್ಯ ಸಂದೇಶಗಳನ್ನು ಕಂಡು ದಿಗ್ಭ್ರಮೆಗೊಂಡರು. ತಾನು ಯಾವುದೇ ಹಣದ ವ್ಯವಹಾರ ಮಾಡದೆಯೇ ಬ್ಯಾಂಕಿನ ಸಂದೇಶಗಳನ್ನು ಕಂಡು ಅವರು ಕಂಗಾಲಾಗಿ ಹೋದರು.

ಬ್ಯಾಂಕಿನ ಕಡೆಯಿಂದ ಯಾವುದೇ ಅಚಾತುರ್ಯವಾಗಿಲ್ಲ ಎಂದಿರುವ ಅಧಿಕಾರಿಗಳು ಅವರ ಹಣವನ್ನು ಮರಳಿಸಲು ಒಪ್ಪದಿರುವುದು ದಾಸ್ ಅವರಿಗೆ ಇನ್ನಷ್ಟು ಆಘಾತವನ್ನುಂಟು ಮಾಡಿದೆ.

ವಂಚನೆ ನಡೆದಿದ್ದು ಹೇಗೆ?….

ಅಭಿಜಿತ್ ದಾಸ್ ಅವರ ಮೊಬೈಲ್‌ ಫೋನ್‌ ಅನ್ನೇ ನಕಲು ಮಾಡಿದ ದುಷ್ಕರ್ಮಿಗಳು, ಐಪಿಐಎನ್ (ನೆಟ್ ಬ್ಯಾಂಕಿಂಗ್ ವಾಸ್ವರ್ಡ್) ಬದಲಾವಣೆ ಮಾಡಿದ್ದಾರೆ. ಬಳಿಕ ವಿವಿಧ ಹೆಸರಿನ ವ್ಯಕ್ತಿಗಳನ್ನು ಫಲಾನುಭವಿಗಳಾಗಿ ಮಾಡಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಇದೆಲ್ಲ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ದಾಸ್ ಅವರು, ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ತಮ್ಮ ನೆಟ್ ಬ್ಯಾಕಿಂಗ್ ಸೌಲಭ್ಯವನ್ನು ನಿಷ್ಕ್ರಿಯಗೊಳಿಸುವಂತೆ ಕೇಳಿಕೊಂಡಿದ್ದಾರೆ, ಬಳಿಕ ಕಸ್ಟಮರ್ ಕೇರ್ ಸೂಚನೆಯಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಕ್ಲೋನಿಂಗ್?

ಇತ್ತೀಚಿನ ಒಂದೆರಡು ವರ್ಷಗಳಿಂದ ಎಟಿಎಂ ಡೆಬಿಟ್ ಕಾರ್ಡ್‌ಗಳ ಕ್ಲೋನ್ ಮಾಡುವ ಮೆಷೀನ್‌ಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುತ್ತಿದೆ. ವಿದೇಶದಲ್ಲಿರುವ ಕೆಲ ಆನ್‌ಲೈನ್ ಮಾರಾಟ ತಾಣಗಳು ಕ್ಲೋನಿಂಗ್ ಮಷೀನ್‌ಗಳು, ಎಟಿಎಂ ಕಾರ್ಡ್‌ಗಳ ತಯಾರಿಕೆಗೆ ಬಳಸುವ ಕಾರ್ಡ್ ಮಾರಾಟದಲ್ಲಿ ತೊಡಗಿವೆ. ಇನ್ನು ಎಟಿಎಂ ಕಾರ್ಡ್ ಸಂಖ್ಯೆ, ಪಿನ್ ಸಂಖ್ಯೆಯನ್ನು ಬ್ಯಾಂಕ್‌ಗಳು ಅತ್ಯಂತ ಸುರಕ್ಷಿತವಾಗಿ ಇರಿಸಿರುವುದಾಗಿ ಹೇಳುತ್ತವೆ. ಆದರೂ, ಇಂತಹ ಅತ್ಯಂತ ಸೂಕ್ಷ್ಮ ಎನಿಸುವ ಮಾಹಿತಿ ಹ್ಯಾಕರ್ಸ್‌ಗಳ ಕೈಗೆ ಲಭಿಸುತ್ತಿರುವುದು ಆತಂಕಕಾರಿ. ಇದನ್ನು ತಡೆಗಟ್ಟಲು ಎಟಿಎಂ ಬಳಕೆದಾರರು ಆಗಾಗ ತಮ್ಮ ಪಿನ್ ಸಂಖ್ಯೆಯನ್ನು ಬದಲಿಸುತ್ತಿರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Comments are closed.