ಕರ್ನಾಟಕ

ಮಗಳ ಮೇಲೆ ಕಣ್ಣು ಹಾಕಿದ ಪ್ರಿಯಕರನ ಕೊಂದ ಮಹಿಳೆ

Pinterest LinkedIn Tumblr


ಬೆಂಗಳೂರು: ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಲ್ಲದೆ, ಪುತ್ರಿಯ ಮೇಲೂ ಕಣ್ಣು ಹಾಕಿ, ಕೆಟ್ಟದಾಗಿ ಮಾತನಾಡಿದ ಪ್ರಿಯಕರನನ್ನು ಮಹಿಳೆಯೊಬ್ಬರು ಬರ್ಬರವಾಗಿ ಹತ್ಯೆಗೈದ ಘಟನೆ ದೊಡ್ಡಬಿದರೆ ಕಲ್ಲು ಬಳಿ ಗುರುವಾರ ನಡೆದಿದೆ.

ಕೆಜಿಎಫ್ ಮೂಲದ ದಾಸರಹಳ್ಳಿ ನಿವಾಸಿ ರಘು (33) ಕೊಲೆಯಾದವ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರದ ರೂಪಾ (32) ಎಂಬಾಕೆಯನ್ನು ಬಂಧಿಸಲಾಗಿದೆ. ರಘು ಮತ್ತು ರೂಪಾ ನಡುವೆ ಐದು ವರ್ಷಗಳಿಂದ ಅನೈತಿಕ ಸಂಬಂಧವಿದ್ದು, ಆಗಾಗ ರೂಪಾಳ ಮನೆಗೆ ಬರುತ್ತಿದ್ದ ರಘು, ಆಕೆ ಮಗಳ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದ.

ಮಾತ್ರವಲ್ಲದೆ, ತನ್ನೊಟ್ಟಿಗೆ ಮಲಗಿಸುವಂತೆ ಪೀಡಿಸುತ್ತಿದ್ದ. ಇದರಿಂದ ಕೋಪಗೊಂಡ ರೂಪಾ ಬುಧವಾರ ತಡರಾತ್ರಿ ಮನೆಗೆ ಬಂದ ಪ್ರಿಯಕರನಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನಂತರ ಗೆùಂಡರ್‌ ಕಲ್ಲಿನಿಂದ ಜಜ್ಜಿ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸನ ಮೂಲದ ರೂಪಾ ಮತ್ತು ಪ್ರಭು 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ರೂಪಾ ಪತಿ ಪ್ರಭು ಮತ್ತು ರಘು ಈ ಮೊದಲು ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಲುಗೆ ಮೇಲೆ ರಘು ಆಗಾಗ ಪ್ರಭು ಅವರ ಮನೆಗೆ ಬಂದು ಹೋಗುತ್ತಿದ್ದ.

ಈ ನಡುವೆ ಆರೋಪಿ ರೂಪಾ ಜತೆ ರಘುಗೆ ಸಲುಗೆ ಬೆಳೆದಿದ್ದು, ಆಕೆಯ ಪತಿ ಪ್ರಭು ಇಲ್ಲದ ವೇಳೆ ಮನೆಗೆ ಬಂದು ಹೋಗುತ್ತಿದ್ದ. ಈ ನಡುವೆ ರೂಪಾಳ ಅಪ್ರಾಪ್ತ ಮಗಳ ಮೇಲೆ ಕಣ್ಣು ಹಾಕಿದ್ದ ರಘು, ಆಕೆಯನ್ನು ತನ್ನೊಟ್ಟಿಗೆ ಮಲಗಿಸುವಂತೆ ನಿತ್ಯ ಪೀಡಿಸುತ್ತಿದ್ದ. ಇದಕ್ಕೆ ರೂಪಾ ಒಪ್ಪಿರಲಿಲ್ಲ.

ಚಾಕುವಿನಿಂದ ಕೊಲ್ಲಲು ಯತ್ನ: ಎರಡು ದಿನಗಳ ಹಿಂದೆ ರೂಪಾ ಪತಿ ಪ್ರಭು, ಜಾತ್ರೆ ನಿಮಿತ್ತ ತಿಪಟೂರಿಗೆ ತೆರಳಿದ್ದರು. ಮಂಗಳವಾರ ರಾತ್ರಿ ಮನೆಗೆ ಬಂದ ರಘು, ರೂಪಾಳ ಪುತ್ರಿಯ ಕೈ ಹಿಡಿದು ಎಳೆದಾಡಿದ್ದ. ಇದೇ ವಿಚಾರವಾಗಿ ಇಬ್ಬರೂ ಜಗಳವಾಡಿದ್ದರು. ಬುಧವಾರ ರಾತ್ರಿ ಬಂದಾಗಲೂ ರಘು ಅಸಭ್ಯವಾಗಿ ನಡೆದುಕೊಂಡಿದ್ದ.

ಇದರಿಂದ ಕೋಪಗೊಂಡ ರೂಪಾ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಮಲಗಿಸಿ, ಕೈ, ಕಾಲು ಕಟ್ಟಿದ್ದಾಳೆ. ತಡರಾತ್ರಿ 1.30ರ ಹೊತ್ತಿಗೆ ತರಕಾರಿ ಕತ್ತರಿಸುವ ಚಾಕುವಿನಿಂದ ತಲೆ, ಕುತ್ತಿಗೆ ಇತರೆ ಭಾಗಗಳಿಗೆ ಇರಿದು ಕೊಲೆಗೈಯಲು ಯತ್ನಿಸಿದ್ದಾಳೆ. ಆದರೆ, ಚಾಕು ಹರಿತವಿಲ್ಲದ ಕಾರಣ ಕೊಲ್ಲಲು ಸಾಧ್ಯವಾಗಿಲ್ಲ.

ಬಳಿಕ ಮನೆಯಲ್ಲಿದ್ದ ಗೆùಂಡರ್‌ ಕಲ್ಲು ತಂದು ತಲೆ ಮೇಲೆ ಎತ್ತಿ ಹಾಕಿ ಕೂಲೆಗೈದಿದ್ದಾಳೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರೂಪಾ ಮನೆಯಿಂದ ಜೋರಾಗಿ ಶಬ್ಧ ಬರುತ್ತಿರುವುದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ರಘು ಮೃತಪಟ್ಟಿದ್ದ.

ಮಕ್ಕಳಿಗೆ ನಿತ್ಯ ನಿದ್ದೆ ಮಾತ್ರೆ: ವಿವಾಹಿತನಾಗಿರುವ ರಘು ಐದು ವರ್ಷಗಳಿಂದ ರೂಪಾ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ. ರೂಪಾಳ ಪತಿ ಪ್ರಭು ಮನೆಯಲ್ಲಿ ಇಲ್ಲದ ವೇಳೆ ರಾತ್ರಿ ಹೊತ್ತು ಮನೆಗೆ ಬರುತ್ತಿದ್ದ ರಘು, ನಿತ್ಯ ನಿದ್ದೆ ಮಾತ್ರೆ ತರುತ್ತಿದ್ದ. ಅದನ್ನು ರೂಪಾ ತನ್ನ ಅಕ್ರಮ ಸಂಬಂಧದ ಬಗ್ಗೆ ತಿಳಿಯಬಾರದು ಎಂದು ಇಬ್ಬರೂ ಮಕ್ಕಳ ಊಟದಲ್ಲಿ ಬೆರೆಸುತ್ತಿದ್ದಳು. ಈ ಆಹಾರ ಸೇವಿಸಿದ ಮಕ್ಕಳು ಗಾಢ ನಿದ್ರೆಗೆ ಜಾರುತ್ತಿದ್ದರು ಎನ್ನಲಾಗಿದೆ.

ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌: ರೂಪಾ ಜತೆ ಐದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ ರಘು, ರೂಪಾಗೆ ಗೊತ್ತಾಗದ ಹಾಗೆ ಆಕೆಯ ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದ. ಈ ಫೋಟೋ, ವಿಡಿಯೋಗಳನ್ನು ತೋರಿಸಿ ಆಗಾಗ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ರಘು, ಅಲ್ಪಸ್ವಲ್ಪ ಹಣ ಕೀಳುವ ಜತೆಗೆ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇತ್ತೀಚೆಗೆ ಪುತ್ರಿಯ ಮೇಲೆ ಕಣ್ಣು ಹಾಕಿದ್ದ ರಘು ಅದೇ ಫೋಟೋ, ವಿಡಿಯೋ ತೋರಿಸಿ ಬೆದರಿಸುತ್ತಿದ್ದ. ಜತೆಗೆ ಮಗಳೊಂದಿಗೆ ಆತ ಅಸಭ್ಯವಾಗಿ ವರ್ತಿಸಿದ್ದ. ಆದ್ದರಿಂದ ಆತನನ್ನು ಕೊಂದಿರುವುದಾಗಿ ಆರೋಪಿ ರೂಪಾ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಕ್ರಮ ಸಂಬಂಧಕ್ಕೆ ತಿಲಾಂಜಲಿ: ರಘು ಮತ್ತು ರೂಪಾ ಐದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ವೇಳೆ ರಘು ರೂಪಾಳ ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದ. ಇದನ್ನು ತೋರಿಸಿ ಆಕೆಗೆ ಆಗಾಗ್ಗ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಹಾಗೂ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಅಲ್ಲದೇ ಇತ್ತೀಚೆಗೆ ಪುತ್ರಿಯ ಬಗ್ಗೆ ಕೆಟ್ಟದಾಗಿ ನಡೆದುಕೊಂಡು, ಅಶ್ಲೀಲವಾಗಿ ಮಾತನಾಡಿದ್ದ‌ರಿಂದ ಕೊಂದಿದ್ದಾಗಿ ಆರೋಪಿತೆ ಮಹಿಳೆ ರೂಪಾ ಹೇಳಿಕೆಯಲ್ಲಿ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.