ಕರ್ನಾಟಕ

ವೋಟ್‌ ಮಾಡಿದ್ರೆ ಹೋಟೆಲ್‌ನಲ್ಲಿ ರಿಯಾಯಿತಿ!

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಬಿಬಿಎಂಪಿಯು, ನಾನಾ ಪ್ರಯೋಗಗಳಿಗೆ ಕೈ ಹಾಕಿದೆ. ಮತದಾನ ಮಾಡಿದವರಿಗೆ ಶಾಪಿಂಗ್‌ ಮಾಲ್‌, ಸಿನಿಮಾ ಟಿಕೆಟ್‌, ಹೋಟೆಲ್‌ಗಳಲ್ಲಿ ರಿಯಾಯಿತಿ ನೀಡಲು ಚಿಂತನೆ ನಡೆಸಿದೆ.

‘‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ 52.40ರಷ್ಟು ಮತದಾನ ನಡೆದಿತ್ತು. ಈ ಪ್ರಮಾಣವನ್ನು ಜಾಸ್ತಿ ಮಾಡಲು ಹಲವಾರು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮತದಾನದ ಗುರುತಿಗಾಗಿ ಬೆರಳಿಗೆ ಹಾಕಿರುವ ಶಾಯಿ ತೋರಿಸಿದವರಿಗೆ ತಿಂಡಿ ತಿನಿಸು, ಸಿನಿಮಾ ಟಿಕೆಟ್‌ ಮತ್ತು ಶಾಪಿಂಗ್‌ ಮಾಲ್‌ಗಳಲ್ಲಿ ಖರೀದಿಸುವ ವಸ್ತುಗಳಿಗೆ ರಿಯಾಯಿತಿ ದೊರಕಿಸಿಕೊಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಹೋಟೆಲ್‌, ಶಾಪಿಂಗ್‌ ಮಾಲ್‌ ಮತ್ತು ಸಿನಿಮಾ ಮಂದಿರಗಳ ಮಾಲೀಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ,’’ ಎಂದು ಬಿಬಿಎಂಪಿ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

‘‘ಇದೇ ಶನಿವಾರ ಹೋಟೆಲ್‌, ಶಾಪಿಂಗ್‌ ಮಾಲ್‌ ಮತ್ತು ಸಿನಿಮಾ ಮಂದಿರಗಳ ಮಾಲೀಕರ ಸಭೆ ಕರೆಯಲಾಗಿದೆ. ಸಭೆ ಬಳಿಕ ಮತದಾನ ಮಾಡಿದವರಿಗೆ ರಿಯಾಯಿತಿ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ ಶೇಕಡ ಎಷ್ಟು ರಿಯಾಯಿತಿ ನೀಡಬೇಕು ಎಂಬುದರ ಬಗ್ಗೆ ಮಾಲೀಕರೇ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ. ಶೇ 5 ರಿಂದ 10ರವರೆಗೆ ರಿಯಾಯಿತಿ ಘೋಷಿಸುವ ಸಾಧ್ಯತೆಗಳಿವೆ,’’ ಎಂದು ಹೇಳಿದರು.

‘‘ಮತದಾನದ ದಿನದಂದು ಜನರು ನಗರ ಬಿಟ್ಟು ಹೋಗದಂತೆ ತಡೆಯಲು ಮತ್ತು ಮತದಾನಕ್ಕೆ ಪ್ರೇರೇಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮತಗಟ್ಟೆಗಳಿಗೆ ಮಾರ್ಗ ತೋರುವ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಮನೆ ಮನೆಗೆ ವೋಟರ್‌ ಸ್ಲಿಪ್‌ ಮತ್ತು ಮಾರ್ಗದರ್ಶಿ ಕೈಪಿಡಿಯನ್ನು ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ,’’ ಎಂದು ತಿಳಿಸಿದರು.

ರಾಜಕೀಯ ಪಕ್ಷದ ಮುಖಂಡರೊಂದಿಗೆ ಸಭೆ:

ನಗರದ ಮಲ್ಲೇಶ್ವರದಲ್ಲಿನ ಐಪಿಪಿ ಕೇಂದ್ರದಲ್ಲಿ ನಾನಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಆಯುಕ್ತರು, ಇವಿಎಂ ಮತ್ತು ವಿವಿಪ್ಯಾಟ್‌ಗಳ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಚುನಾವಣಾ ಅಕ್ರಮದಲ್ಲಿ ಭಾಗಿಯಾಗದಂತೆ ತಿಳಿ ಹೇಳಿದರು.

ಚುನಾವಣಾ ಸಿಬ್ಬಂದಿಯೇ ಮತದಾರರಿಗೆ ಭಾವಚಿತ್ರವುಳ್ಳ ವೋಟರ್‌ ಸ್ಲಿಪ್‌ಗಳನ್ನು ವಿತರಿಸಲಿದ್ದಾರೆ. ಹೀಗಾಗಿ, ಪಕ್ಷಗಳು ತಮ್ಮ ಕಾರ್ಯಕರ್ತರ ಮುಖೇನ ವೋಟರ್‌ ಸ್ಲಿಪ್‌ ವಿತರಿಸುವ ಕೆಲಸ ಮಾಡಬಾರದು. ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್ಸ್‌ಗಳನ್ನು ನಿಯಮಬಾಹಿರವಾಗಿ ಅಳವಡಿಸಿದರೆ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘‘ನಗರದಲ್ಲಿರುವ ಫ್ಲೆಕ್ಸ್‌, ಬ್ಯಾನರ್‌ ಮುದ್ರಕರು, ತಯಾರಕರೊಂದಿಗೆ ಸಭೆ ನಡೆಸಲಾಯಿತು. ಚುನಾವಣಾಧಿಕಾರಿಗಳ ಗಮನಕ್ಕೆ ತಾರದೆಯೇ ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸದಂತೆ ಸೂಚಿಸಲಾಗಿದೆ. ಒಂದೊಮ್ಮೆ ಮುದ್ರಿಸಿದರೆ, ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಪ್ರಚಾರ ಸಾಮಗ್ರಿಗಳ ಮುದ್ರಣದ ವಿವರ ಮತ್ತು ಅದಕ್ಕೆ ತಗಲುವ ವೆಚ್ಚದ ಮಾಹಿತಿಯನ್ನು ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ,’’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘‘ಚುನಾವಣಾ ನೀತಿ ಸಂಹಿತೆ ಜಾರಿಯಾದ 24 ತಾಸುಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಅಳವಡಿಸಿದ್ದ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಕೇಂದ್ರ, ರಾಜ್ಯ ಸರಕಾರದ ಸಾಧನೆಯ ಪ್ರಚಾರ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಶೇ 90ರಷ್ಟು ಫಲಕಗಳನ್ನು ತೆಗೆದು ಹಾಕಲಾಗಿದೆ. 110 ಹಳ್ಳಿ ವ್ಯಾಪ್ತಿಯಲ್ಲಿ ಶೇ 10ರಷ್ಟು ಫಲಕಗಳಿದ್ದು, ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ,’’ ಎಂದು ಹೇಳಿದರು.

Comments are closed.