ಮುಂಬೈ

ಶರಣಾಗುವ ಒಲವು ತೋರಿದ ದಾವೂದ್‌

Pinterest LinkedIn Tumblr


ಮುಂಬಯಿ: ಪಾಕಿಸ್ತಾನದಲ್ಲಿ ನೆಲೆಸಿದ್ದಾನೆಂದು ಹೇಳಲಾಗುತ್ತಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕಸ್ಕರ್‌ಗೆ ಭಾರತಕ್ಕೆ ಬಂದು ಶರಣಾಗುವ ಇರಾದೆಯಿದೆ.

ಆದರೆ ಆತ ತನ್ನ ವಿರುದ್ಧವಿರುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಯುವವರೆಗೂ ಭಾರಿ ಭದ್ರತೆಯ ಮುಂಬಯಿಯ ಆರ್ಥರ್‌ ರೋಡ್‌ ಜೈಲಿನಲ್ಲಿಯೇ ಇರಿಸಬೇಕೆಂಬುದೂ ಸೇರಿದಂತೆ ಒಂದಷ್ಟು ಷರತ್ತುಗಳನ್ನು ಮುಂದಿಟ್ಟಿದ್ದು, ಅದಕ್ಕೆ ಕೇಂದ್ರ ಸರಕಾರ ಒಪ್ಪದ ಹಿನ್ನೆಲೆಯಲ್ಲಿ ಶರಣಾಗತಿ ಪ್ರಕ್ರಿಯೆಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಹೆಸರಾಂತ ವಕೀಲ ಶ್ಯಾಮ್‌ ಕೇಶ್ವಾನಿ ಹೇಳಿದ್ದಾರೆ.

ದಾವೂದ್‌ಗೆ ವಯಸ್ಸಾಗಿದ್ದು, ಭಾರತದಲ್ಲಿಯೇ ಸಂಬಂಧಿಕರ ಜತೆ ಕಾಲ ಕಳೆದು ಇಲ್ಲಿಯೇ ಸಾಯುವ ಆಸೆ ಆತನಲ್ಲಿ ಹುಟ್ಟಿಕೊಂಡಿದೆ ಎಂದು ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ವಕೀಲ ಕೇಶ್ವಾನಿ ಕೂಡ ದಾವೂದ್‌ ಶರಣಾಗತಿಯ ಇಂಗಿತ ಹೊರಹಾಕಿದ್ದಾರೆ.

ಭೂ ಕಬಳಿಕೆ, ಹಫ್ತಾ ವಸೂಲಿ ಪ್ರಕರಣದಲ್ಲಿ ದಾವೂದ್‌ ಸಹೋದರ ಇಕ್ಬಾಲ್‌ ಇಬ್ರಾಹಿಂ ಕಸ್ಕರ್‌ ಪರ ವಾದಿಸುತ್ತಿರುವ ಕೇಶ್ವಾನಿ ಅವರು, ದಾವೂದ್‌ಗೆ ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಬಂದು ಶರಣಾಗುವ ಮನಸ್ಸಾಗುತ್ತಿದೆ. ಕೆಲವು ತಿಂಗಳ ಹಿಂದೆ ತನ್ನ ಈ ಒಲವನ್ನು ಸಂಬಂಧಿಕರ ಮೂಲಕ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರ ಮುಂದೆ ಇರಿಸಿದ್ದ.

ಆತನ ಪೂರ್ವ ಷರತ್ತನ್ನು ಒಪ್ಪಿಕೊಳ್ಳಲು ಸರಕಾರ ಸಿದ್ಧವಿಲ್ಲ. ಹಾಗಾಗಿ ಭಾರತಕ್ಕೆ ಕರೆತಂದು ನ್ಯಾಯಾಲಯದ ಕಟಕಟೆ ಮುಂದೆ ನಿಲ್ಲಿಸುವುದು ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ. 2008ರ ಮುಂಬಯಿ ದಾಳಿಯಲ್ಲಿ ಸೆರೆಸಿಕ್ಕು ನಂತರ ನೇಣುಗಂಬ ಏರಿದ ಪಾಕ್‌ ಭಯೋತ್ಪಾದಕ ಅಜ್ಮಲ್‌ ಕಸಬ್‌ನನ್ನು ಸಹ ಇದೇ ಆರ್ಥರ್‌ ರೋಡ್‌ ಜೈಲಿನಲ್ಲಿ ಇರಿಸಲಾಗಿತ್ತು.

Comments are closed.