ದೆಹಲಿ: ಅಫ್ಘಾನಿಸ್ತಾನದಲ್ಲಿ ಭಾರತದ ಪ್ರಭಾವ ತಗ್ಗಿಸಲು ಏನೆಲ್ಲ ಪ್ರಯತ್ನ ಪಟ್ಟರೂ ಪಾಕಿಸ್ತಾನಕ್ಕೆ ಈ ನಿಟ್ಟಿನಲ್ಲಿ ಹಿನ್ನಡೆಯಾಗಿದೆ.
ಎರಡೇ ವರ್ಷಗಳ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಮಾರುಕಟ್ಟೆ ಶೇರಿನಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಅಫ್ಘಾನಿಸ್ತಾನದ ವಹಿವಾಟಿನಲ್ಲಿ ಭಾರತದ ಮುಂದೆ ಪಾಕ್ ಹಾಗು ಚೀನಾ ಸಾಕಷ್ಟು ಹಿಂದೆ ಉಳಿದಿವೆ ಎಂದು ಪಾಕ್ ದೈನಿಕ ಡಾನ್ ವರದಿ ಮಾಡಿದೆ.
ಕಾಬೂಲ್‌ಗೆ ತನ್ನ ರಫ್ತಿನ ಮೇಲೆ ಭಾರೀ ಸಬ್ಸಿಡಿ ತರುವ ಮೂಲಕ ಭಾರತ ಅಫ್ಘನ್ ಮಾರುಕಟ್ಟೆಯಲ್ಲಿ ಭಾರತ ಸಾಕಷ್ಟು ಪ್ರಭಾವ ಹೊಂದಿದೆ ಎಂದು ಪಾಕಿಸ್ತಾನ-ಅಫ್ಘಾನಿಸ್ತಾನ ಕೈಗಾರಿಕೆ ಹಾಗು ವ್ಯಾಪಾರದ ಜಂಟಿ ಆಯೋಗದ ಚೇರ್ಮನ್ ಜುಬೇರ್ ಮೋತಿವಾಲಾ ಹೇಳಿದ್ದಾರೆ.
“ಕಡಿಮೆ ದರದ ಟಿಕೆಟ್‌ಗಳು, ಸುಲಭದಲ್ಲಿ ಸಿಗುವ ವೀಸಾಗಳು ಅಫ್ಘಾನ್ನರನ್ನು ಭಾರತದತ್ತ ಆಕರ್ಷಿಸುತ್ತಿವೆ” ಎಂದು ಮೋತಿವಾಲಾ ಹೇಳಿದ್ದಾರೆ.
ಅಫ್ಘಾನಿಸ್ತಾನವನ್ನೇ ಮೆಚ್ಚಿಕೊಂಡಿದ್ದ ಪಾಕಿಸ್ತಾನದ 200 ಫ್ಲೋರ್‌ಮಿಲ್‌ಗಳ ಪೈಕಿ 100ನ್ನು ಮುಚ್ಚಲಾಗಿದೆ, ಪಾಕಿಸ್ತಾನದಿಂದ ಅಫ್ಘಾನಿನದತ್ತ ತೆರಳುವ 70,000 ಕಂಟೇನರ್‌ಗಳ ಪೈಕಿ ಈಗಕೇವಲ 7,000 ದಷ್ಟಿದ್ದು ಭಾರತದ ಪ್ರಭಾವದ ಮುಂದೆ ಪಾಕ್ ಅಕ್ಷರಶಃ ತತ್ತರಿಸಿ ಹೋಗಿದೆ.
ಈ ಮುನ್ನ ನೆಲ ಮಾರ್ಗದ ಮೂಲಕ ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟು ಇಟ್ಟುಕೊಳ್ಳಲು ಕೋರಿದ್ದ ಭಾರತದ ಮನವಿಯನ್ನು ತಿರಸ್ಕರಿಸಿದ್ದ ಇಸ್ಲಾಮಾಬಾದ್ ತನ್ನ ನೆಲದ ಮೂಲಕ ಹಾದು ಹೋಗಿ ಕಾಬೂಲ್‌ನೊಂದಿಗೆ ಸಂಪರ್ಕ ಸಾಧಿಸುವ ದೆಹಲಿಯ ಯೋಜೆನೆಗೆ ತಣ್ಣೀರೆರಚಿತ್ತು.
ಬಳಿಕ ಇರಾನ್‌ನ ಚಾಬಾಹರ್ ಬಂದರಿನ ಮುಖಾಂತರ ಭಾರತ ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಮುಂದಾಗಿದೆ. ಕಳೆದ ನವೆಂಬರ್‌ನಲ್ಲಿ ಚಾಬಾಹರ್ ಬಂದರಿನ ಮೂಲಕ ಗೋಧಿ ಸರಕನ್ನ ಅಫ್ಘಾನಿಸ್ತಾನದ ಝರಂಜ್‌ಗೆ ತಲುಪಿಸಿದ ಭಾರತ ಈ ನಿಟ್ಟಿನಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
ಕಾಬೂಲ್-ಇಸ್ಲಾಮಾಬಾದ್ ನಡುವೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವಿದೆಯಾದರೂ ಈ ನಿಟ್ಟಿನಲ್ಲಿ ಹೇಳಿಕೊಳ್ಳುವ ಪ್ರಗತಿ ಸಾಧಿಸಿಲ್ಲ.