ಮುಂಬಯಿ: ತೀರಾ ವಿಭಿನ್ನವಾದ ಘಟನೆಯೊಂದರಲ್ಲಿ ಶಿಕ್ಷಕಿಯೊಬ್ಬಾಕೆಯನ್ನು ವಿದ್ಯಾರ್ಥಿ ಕೊಲೆಗೈದಿರುವ ದುರಂತ ವಾರ್ತೆ ಮುಂಬಯಿನ ಥಾಣೆ ವ್ಯಾಪ್ತಿಯಿಂದ ವರದಿಯಾಗಿದೆ.
ಥಾಣೆಯ ಡೊಂಬಿವಲಿ ಎಂಬಲ್ಲಿ ಘಟನೆ ನಡೆದಿದ್ದು, ತನ್ನ ವಿರುದ್ಧ ಹೆತ್ತವರಲ್ಲಿ ದೂರು ಹೇಳಿರುವ 65ರ ಹರೆಯದ ಹಿರಿಯ ಶಿಕ್ಷಕಿಯನ್ನು ವಿದ್ಯಾರ್ಥಿ ಬರ್ಬರವಾಗಿ ಕೊಲೆಗೈದಿದ್ದಾನೆ.
ಶಿಕ್ಷಕಿಯ ತಲೆಗೆ ಪ್ರೆಶರ್ ಕುಕರ್‌ನಿಂದ ಹೊಡೆದಿರುವ ಬಾಲಕ ಬಳಿಕ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಲ್ಯಾಣ್ ಠಾಣೆಯ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಮನಿಶಾ ಖನೋಲ್ಕರ್ ಎಂಬವರೇ ಮೃತ ಅಧ್ಯಾಪಿಕೆಯಾಗಿದ್ದಾರೆ. ಕೋಪರ್‌ನ ಪರಶುರಾಮ್ ಸೊಸೈಟಿ ನಿವಾಸಿಯಾಗಿರುವ ಈಕೆ ತಮ್ಮ ಮನೆಯಲ್ಲೇ ವಿದ್ಯಾರ್ಥಿಗಳಿಗೆ ಖಾಸಗಿ ಅಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಎಂಟು ದಿವಸಗಳ ಹಿಂದೆ ವಿದ್ಯಾರ್ಥಿ ಬಗ್ಗೆ ಆಕೆಯ ತಾಯಿಯಲ್ಲಿ ಶಿಕ್ಷಕಿ ದೂರು ನೀಡಿದ್ದರು. ಇದರಿಂದ ಕುಪಿತಗೊಂಡಿರುವ ವಿದ್ಯಾರ್ಥಿ ಶಿಕ್ಷಕಿಯ ಹತ್ಯೆಗೈದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.