ಮುಂಬೈ

ಮಹಾರಾಷ್ಟ್ರದಲ್ಲಿ 11,700 ಎಸ್‌ಸಿ, ಎಸ್‌ಟಿ ನೌಕರರ ಉದ್ಯೋಗಕ್ಕೆ ಕುತ್ತು?

Pinterest LinkedIn Tumblr


ಮುಂಬೈ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ/ಪಂಗಡದ ಕೋಟಾದಡಿ ಉದ್ಯೋಗ ಪಡೆದಿರುವವರನ್ನು ಉದ್ಯೋಗದಿಂದ ತೆಗೆದು ಹಾಕಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಲು ಮಹಾರಾಷ್ಟ್ರ ಮುಂದಾಗಿದೆ.

ಏಳು ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಪಾಲಿಸಲು ಮಹಾ ಸರಕಾರ ಮುಂದಾಗಿದೆ.

ಆದರೆ ಇದು ದೇವೇಂದ್ರ ಫಡ್ನವೀಸ್‌ ನೇತೃತ್ವದ ಬಿಜೆಪಿ ಸರಕಾರಕ್ಕೆ ಒಂದು ರೀತಿಯ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದೊಡ್ಡಿದೆ.

ಒಂದು ವೇಳೆ ಈ ಆದೇಶವನ್ನು ಜಾರಿಗೆ ತಂದರೆ 11,700 ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಉದ್ಯೋಗ ಪಡೆದಿರುವ ಮಹಾ ದಂಧೆ ಈಗ ಬಯಲಾಗಿದೆ. ಆದರೆ ತಪ್ಪಿತಸ್ಥರಿಗೆ ಹೇಗೆ ಶಿಕ್ಷೆ ಜಾರಿಗೆ ತರಬೇಕು ಎಂದು ಈಗ ಸರಕಾರದ ದೊಡ್ಡ ತಲೆನೋವಾಗಿದೆ.

ಬಹುತೇಕ ಮಂದಿ 20 ವರ್ಷದ ಹಿಂದೆಯೇ ನೌಕರಿ ಗಿಟ್ಟಿಸಿಕೊಂಡಿದ್ದರು. ಬಹುತೇಕರು ಎರಡನೇ ದರ್ಜೆ ಗುಮಾಸ್ತರಾಗಿ ನೇಮಕಗೊಂಡಿದ್ದು, ಈಗ ಬಡ್ತಿ ಕೂಡ ಪಡೆದಿದ್ದಾರೆ.

ಈಗಾಗಲೇ ಹಲವಾರು ನೌಕರರು ತಮ್ಮ ಹುದ್ದೆಯ ಪ್ರಭಾವ ಬೀರಿ ಒತ್ತಡ ಹೇರಿಸಲು ಮುಂದಾಗಿದ್ದಾರೆ. ಕೆಲವರು ಸರಕಾರಿ ನೌಕರರ ಸಂಘಗಳ ಮೊರೆ ಹೋಗಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದವನ್ನು ಪಾಲನೆ ಮಾಡಬೇಕಾ ಇಲ್ಲವೇ ನ್ಯಾಯಾಂಗ ನಿಂದನೆ ಎದುರಿಸಬೇಕಾ ಎಂಬ ಗೊಂದಲದಲ್ಲಿರುವ ಮಹಾ ಸರಕಾರ, ಈಗ ನ್ಯಾಯಾಂಗ ಇಲಾಖೆ, ಅಡ್ವೋಕೇಟ್‌ ಜನರಲ್‌ ಹಾಗೂ ಇತರೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿದೆ.

ಒಟ್ಟಾರೆ ಈಗ ದೇವೇಂದ್ರ ಫಡ್ನವೀಸ್ ಸರಕಾರ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

-ಉದಯವಾಣಿ

Comments are closed.