ರಾಷ್ಟ್ರೀಯ

ಸರಕಾರಿ ಹಣದಲ್ಲಿ ದುಬಾರಿ ಕನ್ನಡಕ ಖರೀದಿಸಿದ ಸ್ಪೀಕರ್‌

Pinterest LinkedIn Tumblr


ತಿರುವನಂತಪುರ: ಸರಕಾರಿ ಹಣದಲ್ಲಿ ದುಬಾರಿ ಬೆಲೆಯ ಕನ್ನಡಕ ಖರೀದಿಸುವ ಮೂಲಕ ಕೇರಳ ವಿಧಾನಸಭೆ ಸ್ಪೀಕರ್‌ ಪಿ. ಶ್ರೀರಾಮಕೃಷ್ಣನ್‌, ಆರ್ಥಿಕ ಮಿತವ್ಯಯ ಬೋಧಿಸುವ ಕೇರಳ ಎಡರಂಗ ಸರಕಾರಕ್ಕೆ ಮುಜುಗರ ಉಂಟುಮಾಡಿದ್ದಾರೆ.

50 ಸಾವಿರ ರೂ. ಬೆಲೆಯ ಒಂದು ಜೊತೆ ದುಬಾರಿ ಕನ್ನಡಕ ಖರೀದಿಸಿದ್ದ ಸ್ಪೀಕರ್‌ ಶ್ರೀರಾಮಕೃಷ್ಣನ್‌, ಅದರ ವೆಚ್ಚವನ್ನು ಸರಕಾರದ ಖಜಾನೆಗೆ ರವಾನಿಸಿದ್ದರು. ವಕೀಲ ಬಿನು ಎಂಬುವವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿ ಮೂಲಕ ಈ ಸಂಗತಿ ಬಯಲಾಗಿದೆ. ಶನಿವಾರ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ವಿತ್ತೀಯ ಬಿಗಿ ಕ್ರಮಗಳನ್ನು ಪ್ರತಿಪಾದಿಸ ಹೊರಟ ಸರಕಾರಕ್ಕೆ ವಿಧಾನಸಭೆ ಅಧಿವೇಶನದಲ್ಲಿಯೇ ಈ ಕನ್ನಡಕದ ಇಕ್ಕಟ್ಟು ಎದುರಾಯಿತು.

ಶುರುವಿನಲ್ಲಿ ಬಿನು ಅವರ ಅರ್ಜಿಗೆ ಸರಕಾರ ಉತ್ತರ ನೀಡಿರಲಿಲ್ಲ. ನಂತರ ಅವರು ಮಾಹಿತಿ ಹಕ್ಕು ಆಯೋಗದ ಮೊರೆ ಹೋದರು. ಆಗ ಮಾಹಿತಿ ನೀಡುವುದು ಅನಿವಾರ‍್ಯವಾಯಿತು.

ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್‌, ವೈದ್ಯರ ಸಲಹೆ ಮೇರೆಗೆ ತಾವು ಕನ್ನಡಕ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಇದಕ್ಕೂ ಹಿಂದೆ, ರಾಜ್ಯ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಅವರು ಕೂಡ 28 ಸಾವಿರ ರೂ.ಗಳ ಕನ್ನಡಕ ಖರೀದಿಸಿ, ಹಣವನ್ನು ರಾಜ್ಯ ಬೊಕ್ಕಸದಿಂದ ಪಡೆದಿದ್ದರು. ಇದು ಕೂಡ ವಿವಾದ ಸೃಷ್ಟಿಗೆ ಕಾರಣವಾಗಿತ್ತು.

-ಉದಯವಾಣಿ

Comments are closed.