ಗಲ್ಫ್

‘ಮಾರ್ಚ್-22 ” ಸಿನೆಮಾ ನಿರ್ಮಾಪಕ, ದುಬೈ ಉದ್ಯಮಿ ಹರೀಶ್ ಶೇರಿಗಾರ್’ಗೆ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ಪ್ರದಾನ

Pinterest LinkedIn Tumblr

 

ದುಬೈ: ‘ಮಾರ್ಚ್-22 ” ಸಿನೆಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ, ಸಮಾಜ ಸೇವಕ, ಗಾಯಕರೂ ಆಗಿರುವ ಹರೀಶ್ ಶೇರಿಗಾರ್ ಅವರಿಗೆ HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ದುಬೈ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಮಿನಲ್ಲಿ ಗುರುವಾರ ಸಂಜೆ ನಡೆದ ವರ್ಣರಂಜಿತ ಅದ್ದೂರಿ ಸಮಾರಂಭದಲ್ಲಿ ಶಾಂತಿ ಹಾಗು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹರೀಶ್ ಶೇರಿಗಾರ್ ಅವರಿಗೆ ದುಬೈ ಝರೂನಿ ಫೌಂಡೇಶನ್’ನ ಸುಹೈಲ್ ಅಲ್ ಝರೂನಿ ಹಾಗು ಶಾರ್ಜಾ ಎಲೆಕ್ಟ್ರಿಸಿಟಿ & ವಾಟರ್ ಆಥೋರಿಟಿಯ ಡಾ.ರಾಶಿದ್ ಅಲ್ ಲೀಮ್ ಅವರು “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಿದರು. ಈ ವೇಳೆ HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್’ನ ಸ್ಥಾಪಕ ಅಧ್ಯಕ್ಷ ಶಕೀಲ್ ಹಸನ್ ಹೊನ್ನಾಳ ಉಪಸ್ಥಿತರಿದ್ದರು.

ಸಮಾಜದಲ್ಲಿ ಶಾಂತಿಗಾಗಿ ಕೆಲಸ ಮಾಡುವ ಹಾಗೂ ಸಾಮಾಜಿಕ ಕೆಲಸಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಬೈಯ HMC ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಈ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ.

ಕರ್ನಾಟಕ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲೂ ಭರ್ಜರಿ ಪ್ರದರ್ಶನ ಕಂಡಿರುವ ‘ಮಾರ್ಚ್-22 ” ಕನ್ನಡ ಸಿನೆಮಾ ಸಮಾಜದಲ್ಲಿ ಶಾಂತಿ-ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿತ್ತು. ಈ ಸಿನೆಮಾ ಬಗ್ಗೆ ಮಾಧ್ಯಮಗಳು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದವು. ಜೊತೆಗೆ ಹಿಂದೂ-ಮುಸ್ಲಿಮರು ಕೂಡ ಸಿನೆಮಾ ನೀಡಿದ ಸಂದೇಶದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಸಿನೆಮಾ ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.

ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಕರ್ನಾಟಕದವರಿಗೆ ಚಿರಪರಿಚಿತರಾಗಿರುವ ಹರೀಶ್ ಶೇರಿಗಾರ್ ಅವರು ಖ್ಯಾತ ಉದ್ಯಮಿಯಾಗಿದ್ದು, ಜೊತೆಗೆ ಖ್ಯಾತ ಗಾಯಕರಾಗಿಯೂ ಹೆಸರು ಮಾಡಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡ ನಿರ್ಗತಿಕರಿಗೆ ಸದಾ ಸಹಾಯಹಸ್ತವನ್ನು ನೀಡುತ್ತಲೇ ಬಂದಿರುವ ಶೇರಿಗಾರ್, ಕೊಡುಗೈ ದಾನಿ ಎಂದೇ ಖ್ಯಾತರು. ಯುಎಇಯಲ್ಲಿರುವ ಕನ್ನಡಪರ ಸಂಘಟನೆಗಳ ಮಹಾ ಪೋಷಕರು, ದುಬೈ-ಶಾರ್ಜ-ಅಬುದಾಭಿ ಸೇರಿದಂತೆ ಯುಎಇಯಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ, ಕ್ರೀಡಾ, ಮನೋರಂಜನಾ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಿರುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಹರೀಶ್ ಶೇರಿಗಾರ್, ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದ ಎಲ್ಲ ಕಾರ್ಯಕ್ರಮಗಳಿಗೆ ತನು, ಮನ, ಧನಗಳಿಂದ ಸಹಕಾರ ನೀಡುತ್ತಾ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದವರಾಗಿದ್ದಾರೆ.

ಯಾವುದೇ ರೀತಿಯ ಫಲಾಪೇಕ್ಷೆ ನಿರೀಕ್ಷಿಸದೆ ಕನ್ನಡ, ತುಳು, ಬ್ಯಾರಿ, ಕೊಂಕಣಿ ಸಮುದಾಯದ ಕಾರ್ಯಕ್ರಮಗಳಿಗೂ ಸಹಾಯಹಸ್ತ ನೀಡುತ್ತಲೇ ಎಲ್ಲ ಸಮುದಾಯದವರೊಂದಿಗೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಸಮಾರಂಭದಲ್ಲಿ ಭಾರತೀಯ ಮೂಲದ ಕೆಲವು ಮಂದಿ ಸಾಧಕರಿಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬಾಲಿವುಡ್ ನಟ ಹಾಗು youtube ಖ್ಯಾತಿಯ ವರುಣ್ ಪ್ರುತಿ, ಬಾಲಿವುಡ್ ಕಾಮಿಡಿಯನ್ ನಾಗೇಶ್ ಕುಮಾರ್, ನಟಿ ಮಿಸ್ ಗುಲ್ಬಹಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

RJ ಸಾಹಿಲ್ ಝಹೀರ್ ಹಾಗು RJ ಜೂಟ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ವಿವಿಧ ಡ್ಯಾನ್ಸ್ ತಂಡಗಳಿಂದ ಡ್ಯಾನ್ಸ್ ಸೇರಿದಂತೆ ಮನೋರಂಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

Comments are closed.