ಮುಂಬೈ

ವಾಟ್ಸಾಪ್‌ನಲ್ಲಿ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಮಂಗಳಮುಖಿ

Pinterest LinkedIn Tumblr


ಮುಂಬಯಿ: ವಾಟ್ಸಾಪ್‌ ಗುಂಪಿನ ಸದಸ್ಯರಿಂದ ಕಿರುಕುಳ ಮತ್ತು ನಿಂದನೆಗೊಳಗಾದ ಮಂಗಳಮುಖಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ವಿಖ್ರೋಲಿ ಪ್ರದೇಶದಲ್ಲಿ ನಡೆದಿದೆ.

ಕಿನ್ನರ್‌ ಮಾ ಟ್ರಸ್ಟ್‌ ಎಂಬ ಎನ್‌ಜಿಓದ ಕಾರ್ಯದರ್ಶಿಯಾಗಿರುವ ಅನಿತಾ ವಾಡೇಕರ್‌ ಎಂಬವರ ಮೇಲೆ ನಕಲಿ ಮಂಗಳಮುಖಿಯರನ್ನೊಳಗೊಂಡ ವಾಟ್ಸಾಪ್‌ ಗುಂಪೊಂದು ಕಳೆದ ಹಲವು ದಿನಗಳಿಂದ ಕಿರುಕುಳ ನೀಡುತ್ತಿತ್ತಂತೆ. ಇದರಿಂದ ಬೇಸರಕ್ಕೊಳಗಾದ ಕರ್ನಾಟಕ ಮೂಲದ ಅನಿತಾ ವಾಡೇಕರ್‌, ರೂಮಿನಲ್ಲೇ ಕುರ್ಚಿ ಹತ್ತಿ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಈ ವೇಳೆ ಕುರ್ಚಿ ಮಗುಚಿ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ಜೊತೆಗಾರ್ತಿಯರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಮಂಗಳ ಮುಖಿಯರ ಹಕ್ಕಿಗೆ ಹೋರಾಟ ಮಾಡುವ ಕಿನ್ನರ್‌ ಮಾ ಟ್ರಸ್ಟ್‌ನಲ್ಲಿ ಸುಮಾರು ಐದು ಸಾವಿರಕ್ಕೂ ಮೆಂಬರ್‌ಗಳಿದ್ದಾರೆ. ‘ಅನಿತಾರ ನಂಬರ್‌ನ್ನು ಅವರ ಅನುಮತಿಯಿಲ್ಲದೇ ನಕಲಿ ಮಂಗಳಮುಖಿಯರ ವಾಟ್ಸಾಪ್‌ ಗುಂಪಿಗೆ ಸೇರಿಸಲಾಗಿದೆ. ಯಾವುದೋ ಕಾರಣಕ್ಕೆ ಅನಿತಾ ವಿರುದ್ಧ ಆ ಸುಮಾರು 250 ವಾಯ್ಸ್‌ ಮೆಸೇಜ್‌ಗಳನ್ನು ಕಳುಹಿಸಲಾಗಿದ್ದು ಇದರಿಂದ ಖಿನ್ನತೆಗೆ ಒಳಗಾದ ಅನಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಟ್ರಸ್ಟ್‌ನ ಮುಖ್ಯಸ್ಥೆ ಸಲ್ಮಾ ಜಿ ಹೇಳಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೂರ್ಯ ಅಲಿಯಾಸ್ ಸುರೇಶ್, ಕಿಸಿಯ ಅಲಿಯಾಸ್ ಕಿಶೋರ್, ಅಲಿಯಾ ಅಲಿಯಾಸ್ ನದೀಮ್ ಮತ್ತು ಅಖ್ತರ್ ಅಲಿಯಾಸ್ ನಾಯಕ್ ಅವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 306 ಮತ್ತು 511ರಡಿ ಪ್ರಕರಣ ದಾಖಲಿಸಿದ್ದಾರೆ ಆದರೆ ಈವರೆಗೂ ಅವರನ್ನು ಬಂಧಿಸಿಲ್ಲ.

ಅನಿತಾರ ನಂಬರ್‌ ಅವರಿಗೆ ಹೇಗೆ ದೊರಕಿದೆ ಎಂಬುದರ ಕುರಿತು ನಮಗೆ ಮಾಹಿತಿಯಿಲ್ಲ, ಆದರೆ ಪೊಲೀಸರು ಮಾತ್ರ ಈ ಮೂವರನ್ನು ಬಂಧಿಸಲು ಹಿಂದೇಟು ಹಾಕುತ್ತಿರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ಸಲ್ಮಾ ಹೇಳಿದರು.

Comments are closed.