ಅಂತರಾಷ್ಟ್ರೀಯ

ಉತ್ತಮ ಜೀವನಶೈಲಿಯಿಂದ ಕ್ಯಾನ್ಸರ್‌ನಿಂದ ದೂರವಿರಿ

Pinterest LinkedIn Tumblr

* ಶುಭಾ

ಕ್ಯಾನ್ಸರ್‌ ಅಂದಕ್ಷಣ ಸಾವಲ್ಲ. ಅದನ್ನು ಮೀರಿ ನಿಂತವರು ಅದೆಷ್ಟೋ ಮಂದಿ. ಹಾಗಂತ ಅಂಥದ್ದೊಂದು ಕಾಯಿಲೆಯ ವಿರುದ್ಧ ಹೋರಾಡುವುದು ಸುಲಭವಲ್ಲ. ಮನೋಬಲ ಜತೆ ದೇಹಬಲವೂ ಅಗತ್ಯ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ಕ್ಯಾನ್ಸರ್‌ ಮಕ್ಕಳಿಂದ ಹಿಡಿದು ವೃದ್ಧರವರಿಗೆ ಭಯ ಹುಟ್ಟಿಸಿದ್ದು. ಇದೀಗ ಕ್ಯಾನ್ಸರ್‌ ಮಾರಣಾಂತಿಕ ಕಾಯಿಲೆಯಾಗಿ ಉಳಿದಿಲ್ಲ. ತಜ್ಞರ ಪ್ರಕಾರ, ಶೇ. 60ರಷ್ಟು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆ ಇದು. ಅಧ್ಯಯನವೊಂದರ ಪ್ರಕಾರ, ಕ್ಯಾನ್ಸರ್‌ ರೋಗಕ್ಕೆ ಯಶಸ್ವಿ ಚಿಕಿತ್ಸೆ ಪಡೆದು ನೆಮ್ಮದಿಯಿಂದ ಜೀವಿಸುವವರ ಸಂಖ್ಯೆ 2050ರ ಅಂತ್ಯದ ವೇಳೆಗೆ 7 ಕೋಟಿಗೆ ಹೆಚ್ಚಲಿದೆ. ಇದಕ್ಕೆಲ್ಲ ಕಾರಣ ದಿನೇದಿನೇ ಮುಂದುವರಿಯುತ್ತಿರುವ ತಂತ್ರಜ್ಞಾನ.

ತಂತ್ರಜ್ಞಾನ ಅಭಿವೃದ್ಧಿ: ಕ್ಯಾನ್ಸರ್‌ ಚಿಕಿತ್ಸೆ ವೈದ್ಯರಿಗೂ ಸವಾಲಾಗಿತ್ತು. ದಶಕದಿಂದೀಚೆ ಕ್ಯಾನ್ಸರ್‌ ಮೇಲೆ ಅತ್ಯಧಿಕ ಸಂಶೋಧನೆಗಳು ವಿಶ್ವದಾದ್ಯಂತ ನಡೆದಿವೆ. ಔಷಧ ಹಾಗೂ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿವೆ. ನಾನಾ ಬಗೆಯ ಕ್ಯಾನ್ಸರ್‌ ಕಾಯಿಲೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ಸಾಧನಗಳು ಪತ್ತೆ ಆಗಿವೆ. ಶಸ್ತ್ರ ಚಿಕಿತ್ಸೆಗೆ ಮತ್ತಷ್ಟು ಸುಲಭ ಮಾಡಿಕೊಡುವ ಸೈಬರ್‌ ನೈಫ್‌, ರೋಬೋಟ್‌, ಟ್ರೂ ಬೀಮ್‌ ವೈದ್ಯರ ಸಹಾಯಕ್ಕೆ ನಿಂತಿವೆ. ಆದರೆ ತಂತ್ರಜ್ಞಾನಗಳು ಕೂಡ ಕೆಲವು ಮಿತಿಗಳನ್ನು ಹೊಂದಿವೆ. ಹಾಗಾಗಿ ಇನ್ನಷ್ಟು ಪ್ರಭಲ ಸಂಶೋಧನೆಗಳು ನಡೆಯಬೇಕು ಅನ್ನುವುದು ಕ್ಯಾನ್ಸರ್‌ ತಜ್ಞರ ಅಭಿಪ್ರಾಯ. ಕ್ಯಾನ್ಸರ್‌ ಚಿಕಿತ್ಸೆಯ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ವ್ಯಕ್ತಿಗತ ಚಿಕಿತ್ಸೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಭವಿಷ್ಯದಲ್ಲಿ ಇದು ಯಶಸ್ವಿಯಾಗಿ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆಯಾಗಿ ಬಳಕೆಯಾಗುವ ನಿರೀಕ್ಷೆ ಇದೆ.

ಬದಲಾಗಲಿ ಮನೋಭಾವ: ಕ್ಯಾನ್ಸರ್‌ ಎದುರಿಸುವ ಧೈರ‍್ಯ ಇದ್ದು ಬಿಟ್ಟರೆ ನೀವು ಅರ್ಧ ಗೆದ್ದಂತೆ. ಕ್ಯಾನ್ಸರ್‌ ಅಂತ ಗೊತ್ತಾದ ಮೇಲೆ ಕುಗ್ಗಿ ಹೋಗದೆ ಧೈರ‍್ಯವಾಗಿ ಸೂಕ್ತ ಚಿಕಿತ್ಸೆ ಪಡೆದರೆ ರೋಗದಿಂದಾಗುವ ಜಟಿಲತೆ ಹೆಚ್ಚುತ್ತದೆ. ಕ್ಯಾನ್ಸರ್‌ ಪತ್ತೆಯಾದಾಗ ಭಯ ಹೆಚ್ಚಾಗಿ ಒತ್ತಡ ಶುರುವಾಗುತ್ತದೆ. ಅದು ಕ್ಯಾನ್ಸರ್‌ ಬಹುಬೇಗ ಉಲ್ಬಣಗೊಳ್ಳುವಂತೆ ಮಾಡುತ್ತದೆ.ಅಂದರೆ ಮನಸು ಒತ್ತಡ ರಹಿತವಾಗಿರಬೇಕು. ಅದಕ್ಕೆ ಮೊದಲು ಸಾವನ್ನು ಗೆಲ್ಲುವ ವಿಶ್ವಾಸ ನಿಮ್ಮಲ್ಲಿ ಮೂಡಿಸಿಕೊಂಡು ರೋಗ ಪತ್ತೆಯಾದಕ್ಷಣ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸರ್‌ ಇದೆ ಎಂದಾಕ್ಷಣ ಆತಂಕ , ಖಿನ್ನತೆ ಉಂಟಾಗುವುದು ಸಹಜ. ಆದರೆ ಇದು ಮಾನಸಿಕ ಸಮಸ್ಯೆಯಾದರೂ ದೇಹದಲ್ಲೂ ಬದಲಾವಣೆಗಳಾಗುತ್ತವೆ. ಕ್ಯಾನ್ಸರ್‌ ವಿರುದ್ಧ ಹೋರಾಡಬೇಕಾದ ರೋಗ ನಿರೋಧಕ ವ್ಯವಸ್ಥೆ ಕುಂದುತ್ತದೆ. ಇದರಿಂದ ರೋಗ ಉಲ್ಬಣಗೊಂಡು ಸಾವು ಬೇಗ ಸಮೀಪಿಸಬಹುದು. ಕ್ಯಾನ್ಸರ್‌ ಗೆಲ್ಲುವ ವಿಶ್ವಾಸ ಇದ್ದರೆ ಸಾಕಷ್ಟೆ. ಧೈರ‍್ಯ ಕೂಡ ಕ್ಯಾನ್ಸರ್‌ಗೆ ಮದ್ದು.

ಎಲ್ಲಾ ಕ್ಯಾನ್ಸರ್‌ಗಳು ಜೀವವನ್ನು ತೆಗೆದುಕೊಂಡು ಹೋಗುವುದಿಲ್ಲ. ಅದೇ ರೀತಿ ದೇಹದಲ್ಲಾಗುವ ಎಲ್ಲಾ ಬದಲಾವಣೆಗಳು ಕೂಡ ಕ್ಯಾನ್ಸರ್‌ ಇರಬಹುದು ಎಂದು ಸಂಶಯಿಸುವುದು ಸರಿಯಲ್ಲ. ಅದರಲ್ಲಿ ಶೇ. 98ರಷ್ಟು ಕ್ಯಾನ್ಸರ್‌ ಅಲ್ಲದೆಯೂ ಇರಬಹುದು. ಆದರೆ ಕೆಲವು ಲಕ್ಷಣಗಳು ಕಾಣಿಸಿಕೊಂಡ ಶೇ.2ರಷ್ಟು ಮಂದಿಯಲ್ಲಿ ಕ್ಯಾನ್ಸರ್‌ ಪತ್ತೆ ಆಗುತ್ತದೆ. ಆದ್ದರಿಂದ ತತ್‌ ಕ್ಷಣದ ಪರೀಕ್ಷೆ ಹಾಗೂ ಆರೈಕೆಯೇ ಕ್ಯಾನ್ಸರ್‌ ವಿರುದ್ಧ ಹೋರಾಡಲು ಇರುವ ಅತ್ಯುತ್ತಮ ಮಾರ್ಗ.-ಡಾ. ಗೋಪಿನಾಥ್‌, ಕ್ಯಾನ್ಸರ್‌ ತಜ್ಞ

ಉತ್ತಮ ಆಹಾರ ಪದ್ಧತಿ, ನಿರಂತರ ವ್ಯಾಯಾಮ, ದುಶ್ಚಟಗಳಿಂದ ದೂರ ಇರುವುದು, ಹಾಗೂ ಸತತ ಆರೋಗ್ಯ ತಪಾಸಣೆ ಅತ್ಯಗತ್ಯ.- ಪ್ರೊ. ರಮೇಶ್‌, ಕ್ಯಾನ್ಸರ್‌ ತಜ್ಞ

Comments are closed.