ಮುಂಬೈ

‘ಆಬ್ಸೆಂಟ್’ ಆಗಿದ್ದ ವಿದ್ಯಾರ್ಥಿ ಫಲಿತಾಂಶದಲ್ಲಿ ಟಾಪರ್‌: ಕೊನೆಗೂ ಸಿಕ್ಕಿತು ನ್ಯಾಯ

Pinterest LinkedIn Tumblr

ಮುಂಬಯಿ: ಕೊನೆಯ ಸೆಮೆಸ್ಟರ್‌ನಲ್ಲಿ ಎಲ್ಲ ತರಗತಿಗಳಿಗೂ ‘ಗೈರುಹಾಜರಾಗಿದ್ದ’ ಸರಕಾರಿ ಕಾನೂನು ಕಾಲೇಜಿನ (ಜಿಎಲ್‌ಸಿ) ವಿದ್ಯಾರ್ಥಿಯೊಬ್ಬ ಮುಂಬಯಿ ವಿವಿ ಫಲಿತಾಂಶದಲ್ಲಿ ಮಾತ್ರ ಟಾಪರ್‌ ಆಗಿ ಹೊರಹೊಮ್ಮಿದ್ದಾನೆ.

ಆತನ ಉತ್ತರ ಪತ್ರಿಕೆಗಳನ್ನು ಪತ್ತೆ ಮಾಡಿ ಮೌಲ್ಯಮಾಪನ ನಡೆಸಿದ ಬಳಿಕ ಅಂತಿಮ ಸೆಮೆಸ್ಟರ್‌ನಲ್ಲಿ ಶೇ 71.75 ಅಂಕ ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿರುವುದು ದಾಖಲಾಗಿದೆ. ಕಾನೂನು ಪದವಿಯಲ್ಲಿ ಇಷ್ಟು ಅಂಕ ಗಳಿಸಿದರೆ ಅತ್ಯುನ್ನತ ದರ್ಜೆ ಎಂದು ಪರಿಗಣಿಸಲಾಗುತ್ತದೆ.

ಹಿಂದಿನ ಸೆಮೆಸ್ಟರ್‌ಗಳಲ್ಲಿ ಶೇ 65 ಅಂಕ ಗಳಿಸಿ ಟಾಪರ್‌ ಆಗಿದ್ದ ಜಿಎಲ್‌ಸಿ ವಿದ್ಯಾರ್ಥಿ ಪಾರ್ಶ್ವ ಭಂಕಾರಿಯ, ಫೈನಲ್‌ ಸೆಮೆಸ್ಟರ್‌ನ ಎಲ್ಲ ಪರೀಕ್ಷೆಗಳಿಗೂ ಗೈರು ಹಾಜರಾಗಿದ್ದ ಎಂದು ದಾಖಲಾಗಿತ್ತು. ಈ ಬಗ್ಗೆ ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿತ್ತು.

 

ನಂತರ ಹಲವು ಬಾರಿ ವಿಶ್ವವಿದ್ಯಾಲಯದ ಪರೀಕ್ಷಾಂಗ ಇಲಾಖೆಗೆ ಭೇಟಿ ನೀಡಿ ವಿಚಾರಿಸಿದ ಬಳಿಕ ಆತನ ಉತ್ತರ ಪತ್ರಿಕೆಗಳು ಪತ್ತೆಯಾಗಿವೆ. ಈ ಪ್ರಯತ್ನದ ಫಲವಾಗಿ ಕೊನೆಗೂ ದೀಪಾವಳಿಗೆ ಮುನ್ನ ಅಂಕಪಟ್ಟಿ ಆತನ ಕೈಸೇರಿದೆ.

ಮೂರು ವರ್ಷಗಳ ಎಲ್‌ಎಲ್‌ಬಿ ಶಿಕ್ಷಣದ ಅಂತಿಮ ಸೆಮೆಸ್ಟರ್‌ ಫಲಿತಾಂಶ ಆಗಸ್ಟ್‌ನಲ್ಲಿ ಪ್ರಕಟವಾಗಿತ್ತು. ಭಂಕಾರಿಯಾ ಮತ್ತು ಅವರಂತಹ ಇತರ ಹಲವು ವಿದ್ಯಾರ್ಥಿಗಳ ಅಂಕಪಟ್ಟಿಗಳು ಹಂತ ಹಂತವಾಗಿ ಕೈಸೇರುತ್ತಿವೆ. ಎಲ್ಲ ಸೆಮೆಸ್ಟರ್‌ಗಳ ಸರಾಸರಿ ಅಂಕಗಳು ಒಟ್ಟಾಗಿ ಶೇ 70.12 ಅಂಕಗಳನ್ನು ಭಂಕಾರಿಯಾ ಗಳಿಸಿದ್ದಾರೆ. ಇದೂ ಸಹ ಅತ್ಯಧಿಕ ದಾಖಲೆಯೇ ಆಗಿದೆ.

ಅಂತಿಮ ಸೆಮೆಸ್ಟರ್‌ನಲ್ಲಿ ಹೆಚ್ಚಿನ ಅಂಕ ನಿರೀಕ್ಷಿಸಿದ್ದೆ; ಆದರೆ ಶೇ 70 ಅಂಕ ಗಳಿಸಿರುವುದು ತೃಪ್ತಿ ತಂದಿದೆ ಎಂದು ಭಂಕಾರಿಯಾ ತಿಳಿಸಿದರು.

‘ಪರೀಕ್ಷೆಗೇ ಹಾಜರಾಗಿಲ್ಲ (ಆಬ್ಸೆಂಟ್‌) ಎಂದು ನಮೂದಿಸಲಾಗಿದ್ದ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯಕ್ಕೇ ಟಾಪರ್‌ ಆಗಿರುವುದು ಅತ್ಯಂತ ಖುಷಿ ನೀಡಿದೆ’ ಎಂದು ಭಂಕಾರಿಯಾ ಪ್ರತಿಕ್ರಿಯಿಸಿದ್ದಾರೆ.

ವಿಶ್ವವಿದ್ಯಾಲಯದ ಈ ಅವಾಂತರಗಳಿಂದಾಗಿ ಒಂದು ವರ್ಷ ನಷ್ಟವಾಗುವ ಭೀತಿಯಿಂದ ವಿದ್ಯಾರ್ಥಿಗಳು ಈ ವರ್ಷದ ಎಲ್‌ಎಲ್‌ಎಂ ಅಡ್ಮಿಷನ್‌ಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದೀಗ ತಮ್ಮ ಫಲಿತಾಂಶ ಬಂದಿರುವುದರಿಂದ ಭಂಕಾರಿಯಾ ಸ್ನಾತಕೋತ್ತರ ತರಗತಿ ಸೇರ್ಪಡೆಗೂ ಅನುಕೂಲವಾಗಿದೆ.

ಮುಂಬಯಿ ವಿಶ್ವವಿದ್ಯಾಲಯ ಆನ್‌ಲೈನ್‌ ಮೌಲ್ಯಮಾಪನ ಜಾರಿಗೆ ತಂದ ಬಳಿಕ ಫಲಿತಾಂಶ ಪ್ರಕಟಣೆಯಲ್ಲಿ ಹಿಂದೆಂದೂ ಕಾಣದ ವಿಳಂಬದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ವರ್ಷ ತೊಂದರೆಯಾಗಿದೆ.

ಭಂಕಾರಿಯಾ ಅವರಂತೆ ಇನ್ನೂ ಹಲವು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿದ್ದು, ಅವರನ್ನೆಲ್ಲ ‘ಪರೀಕ್ಷೆಗೇ ಹಾಜರಾಗಿಲ್ಲ’ (ಆಬ್ಸೆಂಟ್‌) ಎಂದು ನಮೂದಿಸಲಾಗಿದೆ. ಅಂತಹ ವಿದ್ಯಾರ್ಥಿಗಳ ಫಲಿತಾಂಶವನ್ನು ವಿವಿ ಕಾಯ್ದಿರಿಸಿದೆ.

ನಾಪತ್ತೆಯಾದ ಉತ್ತರ ಪತ್ರಿಕೆಗಳನ್ನು ಕೈಯ್ಯಾರೆ (ಮ್ಯಾನುವಲಿ) ಪತ್ತೆ ಮಾಡಲಾಗಿದ್ದು, ಬಳಿಕ ಮೌಲ್ಯಮಾಪನ ನಡೆಸಲಾಗಿದೆ. ಇದರಿಂದಾಗಿ ಫಲಿತಾಂಶ ಪ್ರಕಟಣೆ ಮತ್ತಷ್ಟು ವಿಳಂಬವಾಗಿದೆ.

ಈ ವರ್ಷ ಸುಮಾರು 3,700 ಉತ್ತರ ಪತ್ರಿಕೆಗಳು ಆನ್‌ಲೈನ್‌ ವ್ಯವಸ್ಥೆಯಿಂದ ನಾಪತ್ತೆಯಾಗಿವೆ. ಕೊನೆಗೂ ಪರೀಕ್ಷಾ ಮಂಡಳಿಯ ನಿರ್ಧಾರದಂತೆ ನಾಪತ್ತೆಯಾಗಿರುವ ಉತ್ತರ ಪತ್ರಿಕೆಗಳಿಗೆ ಸರಾಸರಿ ಅಂಕಗಳನ್ನು ನೀಡಿ ಫಲಿತಾಂಶ ಪ್ರಕಟಿಸಲಾಗಿದೆ.

ಕಾಯ್ದಿರಿಸಿದ ಎಲ್ಲ ಫಲಿತಾಂಶಗಳನ್ನೂ ಪ್ರಕಟಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳುತ್ತಿದ್ದರೆ, ಪ್ರಥಮ ಸೆಮೆಸ್ಟರ್‌ ಮುಗಿಸಿದ ಹಲವು ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಇನ್ನೂ ಬಂದಿಲ್ಲ ಎಂದು ದೂರಿದ್ದಾರೆ.

ಈ ವರ್ಷ ಒಟ್ಟು 50 ಸಾವಿರಕ್ಕೂ ಅಧಿಕ ಮರು ಮೌಲ್ಯಮಾಪನದ ಅರ್ಜಿಗಳು ಬಂದಿದ್ದವು.

Comments are closed.