ರಾಷ್ಟ್ರೀಯ

ಮದುವೆ ಬಿಸಿನೆಸ್‌ಗೆ ಶೇ.10ರಿಂದ 15ರಷ್ಟು ಹೊಡೆತ

Pinterest LinkedIn Tumblr


ಹೊಸದಿಲ್ಲಿ: ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ಮುಂಬರುವ ಮದುವೆ ಅವಧಿಯ ವಾಣಿಜ್ಯ ವ್ಯವಹಾರಗಳಿಗೆ ಶೇ.10ರಿಂದ 15ರಷ್ಟು ಹೊಡೆತ ಬೀಳಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಂ) ಅಂದಾಜು ಮಾಡಿದೆ.

ಪ್ರಸ್ತುತ ದೇಶದಲ್ಲಿನ ಭಾರತೀಯ ಮದುವೆ ಉದ್ಯಮದ ಗಾತ್ರವು 1 ಲಕ್ಷ ಕೋಟಿ ರೂ.ನಷ್ಟಿದೆ. ಅಲ್ಲದೇ, ಉದ್ಯಮವು ವಾರ್ಷಿಕ ಶೇ.20ರಿಂದ 25ರಷ್ಟು ಬೆಳೆಯುತ್ತಿದೆ. ಆದರೆ, ಈ ಸಲ ಪ್ರಗತಿಗೆ ತಡೆ ಬೀಳಲಿದೆ.

ನವೆಂಬರ್‌ನಿಂದ ಮದುವೆ ಅವಧಿ ಆರಂಭಗೊಳ್ಳಲಿದ್ದು, ಮ್ಯಾರೇಜ್‌ ಗಾರ್ಡನ್‌/ಮ್ಯಾರೇಜ್‌ ಹಾಲ್‌, ಟೆಂಟ್‌, ಫೋಟೊಗ್ರಫಿ ಮತ್ತಿತರ ಮದುವೆ ಸಂಬಂಧಿ ವ್ಯವಹಾರಗಳಿಗೆ ಒಂದಿಷ್ಟು ತೊಡಕಾಗಲಿದೆ ಎಂದು ಅಸೋಚಂ ವಿಶ್ಲೇಷಣೆ ಮಾಡಿದೆ.

”ಒಂದು ಮದುವೆಗೆ 3ರಿಂದ 8 ಲಕ್ಷ ರೂ. ತನಕ ವೆಚ್ಚವಾಗುತ್ತದೆ. ಮದುವೆಗೆ ಸಂಬಂಧಿಸಿದ ಸೇವೆಗಳಾದ ಶಾಪಿಂಗ್‌, ಟೆಂಟ್‌ ಬುಕಿಂಗ್‌, ಆಹಾರ ಪೂರೈಕೆ ಸೇವೆಗಳಿಗೆ ಜಿಎಸ್‌ಟಿ ತೊಡಕಾಗಲಿದೆ. ಈ ಸಂಬಂಧಿ ಬಹುತೇಕ ಸೇವೆಗಳಿಗೆ ಜಿಎಸ್‌ಟಿ ಶೇ.18ರಿಂದ 28ರ ನಡುವೆ ನಿಗದಿಯಾಗಿದೆ. ಜಿಎಸ್‌ಟಿ ಜಾರಿಗೆ ಮೊದಲು ಮದುವೆ ಸೇವೆ ಮತ್ತು ವ್ಯವಹಾರಗಳು ನೋಂದಣಿಯಾಗದ ಬಿಲ್‌ಗಳಲ್ಲಿಯೇ ನಡೆಯುತ್ತಿದ್ದವು. ಯಾವುದೇ ತೆರಿಗೆ ಪಾವತಿಯಾಗುತ್ತಿರಲಿಲ್ಲ,” ಎಂದು ಅಸೋಚಂ ಸದ್ಯದ ಪರಿಸ್ಥಿತಿಯನ್ನು ವಿವರಿಸಿದೆ.

ಆದಾಗ್ಯೂ, ”ಮದುವೆಗೆ ಸಂಬಂಧಿಸಿದ ಪ್ರವಾಸೋದ್ಯಮಕ್ಕೆ ಯಾವುದೇ ತೊಡಕಾಗುವುದಿಲ್ಲ. ಒಟ್ಟು ಪ್ರವಾಸೋದ್ಯಮದಲ್ಲಿ ಮದುವೆ ಪ್ರವಾಸೋದ್ಯಮವು ಶೇ.10ರ ಪಾಲನ್ನು ಹೊಂದಿದೆ. ವಿದೇಶಿಯರು, ಶ್ರೀಮಂತರು, ಅನಿವಾಸಿ ಭಾರತೀಯರು ತಮ್ಮ ಮದುವೆಗಳನ್ನು ಕಡಲ ತೀರ, ಅದ್ಧೂರಿ ಮತ್ತು ಸಾಹಸಮಯ ತಾಣಗಳಲ್ಲಿ ನಡೆಸುತ್ತಿದ್ದಾರೆ. ಹೀಗಾಗಿ ಮದುವೆ ಸಂಬಂಧಿ ಪ್ರವಾಸೋದ್ಯಮಕ್ಕೆ ನಷ್ಟವಿಲ್ಲ,” ಎಂದು ಅಸೋಚಂ ಹೇಳಿದೆ.

Comments are closed.