ಹೊಸದಿಲ್ಲಿ: ವಾಹನ ಕದಿಯುವುದರಲ್ಲಿ ಹಾಗೂ ಅದನ್ನು ಮಾರಾಟ ಮಾಡುವುದರಿಲ್ಲಿ ಈತ ನಿಸ್ಸೀಮ.
ಇದುವರೆಗೆ ಸುಮಾರು ಐದುನೂರಕ್ಕೂ ಹೆಚ್ಚು ಕಾರುಗಳನ್ನು ಕದ್ದು ಮಾರಾಟ ಮಾಡಿದ್ದಾನೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಪೊಲೀಸರ ಪಾಲಿಗೆ ಈತ ಮೋಸ್ಟ್ ವಾಂಟೆಡ್.
ತನೌಜ್ ಎಂಬ ಕ್ರಿಮಿನಲ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ವಿಚಾರಣೆ ವೇಳೆ ತನೌಜ್ ತಾನು ಮಾಡುತ್ತಿದ್ದ ಕಳ್ಳತನ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಕಳ್ಳತನಕ್ಕೂ ಮುನ್ನ ಈತ ಹಳೆಯ ಅಥವಾ ಅಪಘಾತಕ್ಕೀಡಾಗಿದ್ದ ವಾಹನವನ್ನು ಖರೀದಿಸುತ್ತಿದ್ದ. ಅದರ ನೋಂದಣಿ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳನ್ನು ಇಟ್ಟುಕೊಳ್ಳುತ್ತಿದ್ದ. ನಂತರ ಅದೇ ಬಣ್ಣದ ಮತ್ತೊಂದು ಕಾರನ್ನು ಕದಿಯುತ್ತಿದ್ದ. ಅದನ್ನು ತನ್ನ ಸಹವರ್ತಿ, ವೃತ್ತಿಯಲ್ಲಿ ಪೇಂಟರ್ ಆಗಿದ್ದ ಶಹದಾಬ್ ಎಂಬಾತನಿಗೆ ನೀಡಿ ರಿಪೇರಿ ಮಾಡಿಸುತ್ತಿದ್ದ. ಅದಕ್ಕೆ ತಾನು ಖರೀದಿಸಿದ್ದ ಕಾರಿನ ಎಂಜಿನ್ ಹಾಗೂ ಚಾಸೀಸ್ ನಂಬರ್ ಹಾಕಿಸುತ್ತಿದ್ದ.
ಕಾರನ್ನು ಸ್ವಲ್ಪ ರಿಪೇರಿ ಮಾಡಿಸಿ ನೋಂದಣಿ ಹಾಗೂ ಇತರೆ ದಾಖಲೆಗಳೊಂದಿಗೆ ಕಾರು ಮಾರಾಟಗಾರರಿಗೆ ಕೊಟ್ಟು ಅಧಿಕ ಲಾಭಕ್ಕೆ ಮಾರಾಟ ಮಾಡುತ್ತಿದ್ದ.
ಈಗ ತನೌಜ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಕೆಲ ದಿನಗಳ ಹಿಂದೆ ಪೊಲೀಸರು ಲಾಲಾ ಲಜಪತ್ ರಾಯ್ ರಸ್ತೆಯಲ್ಲಿ ಈರೋಸ್ ಹೋಟೆಲ್ ಬಳಿ ಕಾರ್ಯಾಚರಣೆ ನಡೆಸಿದರು. ಐ-20 ಕಾರಿನಲ್ಲಿ ವೇಗವಾಗಿ ಬಂದಿದ್ದವನ್ನು ತಡೆದು ವಿಚಾರಣೆ ನಡೆಸಲು ಮುಂದಾದರೂ. ಕೂಡಲೇ ತನೌಜ್ ಪರಾರಿಯಾಗಲು ಯತ್ನಿಸಿದ. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ತಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದು ಎಲ್ಲವನ್ನೂ ಬಾಯ್ಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.