ರಾಷ್ಟ್ರೀಯ

ರಾಷ್ಟ್ರಗೀತೆ ಕಡ್ಡಾಯ: ಕಾಯಿದೆ ತಿದ್ದುಪಡಿಗೆ ಸುಪ್ರೀಂ ಸಲಹೆ

Pinterest LinkedIn Tumblr


ಹೊಸದಿಲ್ಲಿ: ದೇಶಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸುವುದನ್ನು ಕಡ್ಡಾಯಗೊಳಿಸಲು ರಾಷ್ಟ್ರ ಧ್ವಜ ನಿಯಮಾವಳಿಯಲ್ಲಿ ತಿದ್ದುಪಡಿ ತರುವ ನಿಟ್ಟಿನಲ್ಲಿ ಚಿಂತನೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸುವುದಕ್ಕೆ ಸಂಬಂಧಪಟ್ಟಂತೆ ತನ್ನ ಈ ಹಿಂದಿನ ಆದೇಶದ ಪ್ರಭಾವಕ್ಕೊಳಗಾಗದಂತೆ ಕೇಂದ್ರ ಸರಕಾರಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಸೂಚಿಸಿತು.

ಕೇಂದ್ರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ”ಭಾರತ ಬಹು ಸಾಂಸ್ಕೃತಿಕ ರಾಷ್ಟ್ರವಾಗಿದ್ದು, ಏಕರೂಪತೆ ಕಾಯ್ದುಕೊಳ್ಳುವುದಕ್ಕಾಗಿ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸಲೇಬೇಕಿದೆ,” ಎಂದು ವಾದ ಮಂಡಿಸಿದರು.

ಆಗ, ಕೇಂದ್ರ ಸರಕಾರ ತನ್ನ ಡಿಸೆಂಬರ್‌ 1, 2016ರ ಆದೇಶದಲ್ಲಿರುವ ‘ಮೆ’ ಶಬ್ದದ ಬದಲು ‘ಶಲ್‌’ ಪದ ಬಳಸುವ ಮೂಲಕ ಚಲನಚಿತ್ರ ಮಂದಿರಗಳಲ್ಲಿ ಸಿನೆಮಾ ಆರಂಭಗೊಳ್ಳುವುದಕ್ಕೂ ಮೊದಲು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬಹುದು ಎಂದು ಪೀಠ ಸೂಚಿಸಿತು.

 

ದೇಶವಾಸಿಗಳಲ್ಲಿ ನೈಜ ದೇಶಭಕ್ತಿ ಮತ್ತು ರಾಷ್ಟ್ರೀಯತೆ ತುಂಬುವ ನಿಟ್ಟಿನಲ್ಲಿ ದೇಶಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಸಿನೆಮಾ ಆರಂಭಗೊಳ್ಳುವುದಕ್ಕೂ ಮೊದಲು ರಾಷ್ಟ್ರಗೀತೆ ಮೊಳಗಬೇಕು ಹಾಗೂ ಅದೇ ವೇಳೆ ವೀಕ್ಷಕರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಯಾರೇ ಆದರೂ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ತೋರಿಸಿದಾಗ ಅಲ್ಲಿ ತಾಯ್ನಾಡಿಗೆ ಪ್ರೀತಿ ಮತ್ತು ಗೌರವ ಪ್ರತಿಫಲಿಸುತ್ತದೆ ಎಂದು ಅದು ಹೇಳಿದೆ.

ರಾಷ್ಟ್ರಗೀತೆಯನ್ನು ಇಡಿಯಾಗಿ ಅಥವಾ ಅದರ ಒಂದು ತುಣುಕನ್ನು ಯಾವುದೇ ವಸ್ತುವಿನ ಮೇಲೆ ಮುದ್ರಣ ಮಾಡುವುದು ಅಥವಾ ರಾಷ್ಟ್ರಗೀತೆಯ ಗೌರವಕ್ಕೆ ಧಕ್ಕೆ ತರುವಂಥ ಅಥವಾ ಅಷ್ಟೇ ಅಗೌರವ ತೋರುವಂಥ ನಡವಳಿಕೆಯನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದೆ.

ಸಿನೆಮಾ ಮಂದಿರಗಳಲ್ಲಿ ಸಿನೆಮಾ ಆರಂಭಗೊಳ್ಳುವುದಕ್ಕೂ ಮೊದಲು ರಾಷ್ಟ್ರಗೀತೆ ಹಾಡಿಸಲೇ ಬೇಕು ಎಂದು ನಿರ್ದೇಶನ ನೀಡುವಂತೆ ಶ್ಯಾಂ ನಾರಾಯಣ್‌ ಚೌಕ್ಸೆ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌ನಿಂದ ಈ ನಿರ್ದೇಶನ ಹೊರಬಿದ್ದಿದೆ.

Comments are closed.