ಮುಂಬೈ

ಪ್ರಜ್ಞಾ ಸಿಂಗ್ ಗೆ ಜಾಮೀನಿಗೆ ನಮ್ಮ ತಕರಾರಿಲ್ಲ: ಬಾಂಬೆ ಹೈಕೋರ್ಟ್ ಗೆ ಎನ್ ಐಎ ಹೇಳಿಕೆ

Pinterest LinkedIn Tumblr


ಮುಂಬಯಿ: 2008ರ ಮಾಲೇಗಾವ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಸಾಧ್ವಿ ಪ್ರಗ್ಯ ಸಿಂಗ್ ಠಾಕೂರ್ ಗೆ ಬಾಂಬೆ ಹೈಕೋರ್ಟ್ ಒಂದು ವೇಳೆ ಜಾಮೀನು ನೀಡಿದರೆ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಅಧೀನ ನ್ಯಾಯಾಲಯ ಜಾಮಿನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಾಧ್ವಿ ಪ್ರಗ್ಯ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾ. ಆರ್. ವಿ ಮೋರೆ ಮತ್ತು ಶಾಲಿನಿ ಫನ್ಸಾಲ್ಕರ್ ಜೋಶಿ ಪೀಠ ಸಾಧ್ವಿ ಪ್ರಗ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಿತು.
ಈ ಮೊದಲು ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಉಗ್ರ ನಿಗ್ರಹ ದಳ ಮೋಕಾ ಆಧಾರದ ಮೇಲೆ ಒಂದು ಸ್ಫೋಟದಲ್ಲಿ ಭಾಗಿಯಾದ ಆರೋಪಿಗಳು ಮತ್ತೊಂದು ಅಪರಾಧದಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು ಎಂದು ಹೇಳಿತ್ತು.
ಆದರೆ ನಂತರ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಆರೋಪಿ ಸಾಧ್ವಿ ಪ್ರಾಗ್ಯಮಾಲೇಗಾಂವ್ ಸ್ಫೋಟದಲ್ಲಿ ಮಾತ್ರ ಭಾಗಿಯಾಗಿದ್ದಾರೆ. ಹೀಗಾಗಿ ಇಲ್ಲಿ ಮೋಕಾ ಅನ್ವಯವಾಗುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಸಾಧ್ವಿ ಪ್ರಗ್ಯಗೆ ಜಾಮೀನು ನೀಡಲು ನಮ್ಮ ತಕರಾರು ಇಲ್ಲ ಎಂದು ಎನ್ ಐಎ ಸ್ಪಷ್ಟಪಡಿಸಿದೆ.
ಕಳೆದ ಆರು ವರ್ಷಗಳಿಂದ ನಾನು ಜೈಲಿನಲ್ಲಿದ್ದು ಎರಡು ತನಿಖಾ ತಂಡಗಳು ಪ್ರಕರಣ ಸಂಬಂಧ ವಿರೋಧಾತ್ಮಕ ವರದಿ ಸಲ್ಲಿಸಿವೆ. ಇನ್ನು ಹೆಚ್ಚಿನ ಸಮಯ ನನ್ನನ್ನು ಜೈಲಿನಲ್ಲೇ ಇರಿಸುವುದು ಸರಿಯಲ್ಲ, ವಿಚಾರಣೆ ಅಂತಿಮ ಹಂತ ತಲುಪಲು ಇನ್ನೂ ಹೆಚ್ಚಿನ ಸಮಯವಕಾಶ ತೆಗೆದುಕೊಳ್ಳುತ್ತದೆ. ಮಹಿಳೆಯಾಗಿರುವ ನಾನು ಹಲವು ರೋಗಗಳಿಂದ ಬಳಲುತ್ತಿದ್ದೇನೆ, ಹೀಗಾಗಿ ಷರತ್ತಿನ ಮೇಲೆ ಜಾಮೀನು ನೀಡಬೇಕು ಎಂದು ಸಾಧ್ವಿ ಪ್ರಗ್ಯ ತಮ್ಮ ಜಾಮೀನು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Comments are closed.