ಮುಂಬೈ

`ವನಿತಾ ರತ್ನ’ `ಗೋಕುಲ ರತ್ನ’ ಬಿರುದಾಂಕಿತ ರತ್ನ ಗುರುರಾಜ್ ಆಚಾರ್ಯ ನಿಧನ

Pinterest LinkedIn Tumblr

ratna_acharya_obitury

ಮುಂಬಯಿ, ಜ.02: ಬಿ.ಎಸ್.ಕೆ.ಬಿ ಅಸೋಸಿಯೇಶನ್, ಗೋಕುಲ ಸಂಸ್ಥೆಯ ಸ್ಥಾಪಕ ಸದಸ್ಯರೂ ಮಾಜಿ ಅಧ್ಯಕ್ಷ ಯು.ಗುರುರಾಜ ಆಚಾರ್ಯ (ದಿವಂಗತರು) ಅವರ ಧರ್ಮಪತ್ನಿ, `ಗೋಕುಲ ರತ್ನ’ ಪ್ರಶಸ್ತಿ ವಿಜೇತೆ, ಗೋಕುಲದ ಹಿರಿಯ ಸದಸ್ಯೆ, ಮಧ್ವೇಶ ಭಜನ ಮಂಡಳಿಯ ಅಧ್ಯಕ್ಷೆ, ಅಪ್ರತಿಮ ಸಮಾಜ ಸೇವಕಿ, ಆದರ್ಶ ಮಹಿಳೆ, ಕಲಾಭಿಮಾನಿ, ಕಲಾ ಪೋಷಕಿ, ಬಹುಮುಖ ಪ್ರತಿಭೆ, ಮುಂಬಯಿ ತುಳು ಕನ್ನಡಿಗ ಮಮತೆಯ `ಅಮ್ಮ’ ಎಂದೇ ಕರೆಸಿ ಕೊಂಡಿರುವ ಮಹಾನಗರದಲ್ಲಿನ ಹೆಸರಾಂತ ಸಮಾಜ ಸೇವಕಿ ಶ್ರೀಮತಿ ರತ್ನ ಗುರುರಾಜ್ ಆಚಾರ್ಯ (87.) ಅವರು ಕಳೆದ ಭಾನುವಾರ (ಜ.01) ರಾತ್ರಿ ಅಲ್ಪ ಕಾಲದ ಅನಾರೋಗ್ಯದಿಂದ ಅಂಧೇರಿ ಪಶ್ಚಿಮದ ಯಾರ್ರಿ ರೋಡ್‌ನಲ್ಲ್ಲಿನ ಶಾಂತಿ ನಿಕೇತನ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿಯ ಶ್ರೀ ಸನ್ನಿಧಿ ಸ್ವನಿವಾಸದಲ್ಲಿ ನಿಧನರಾದರು.

ಮೂಲತಃ ಕಟಪಾಡಿ ಅಚ್ಚಡ ಗ್ರಾಮಸ್ಥ ಯು.ಗುರುರಾಜ ಆಚಾರ್ಯ ಅವರ ಧರ್ಮಪತ್ನಿ ಆಗಿದ್ದ ರತ್ನ ಆಚಾರ್ಯರು ಪಡುಬಿದ್ರಿ ಸಾಂತೂರು ನಿವಾಸಿ ಆಗಿದ್ದು ಮುಂಬಯಿ ಮಹಾನಗರದ ಜನತೆಗೆಲ್ಲಾ ಅಕ್ಕರೆಯ `ರತ್ನಕ್ಕ’ ಎಂದೇ ಜನಜನಿತರಾಗಿದ್ದರು. ಸದಾ ಹಸನ್ಮುಖಿಯಾಗಿ ಲವಲವಿಕೆಯಲ್ಲಿ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ರತ್ನಕ್ಕ ಓರ್ವ ಕೊಡುಗೈದಾನಿ, ಸಮಾಜ ಸೇವಕಿ, ಧರ್ಮ ನಿಷ್ಠಾಳುವಾಗಿ ನಗರದಾದ್ಯಂತ ಕ್ರಮಿಸಿ ತನ್ನಿಂದಾದ ಹಲವು ರೀತಿಯ ಸೇವೆಗಳನ್ನು ಪೂರೈಸಿ ಧನ್ಯರೆಣಿಸಿದ್ದರು. ಅವರ ಅಪ್ರತಿಮ ಪ್ರತಿಭೆ, ಅನನ್ಯ ಸೇವೆಯನ್ನು ಮನವರಿಸಿ ಬಿ‌ಎಸ್‌ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ 2016 ರಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಂಜೀವಿನಿ ಟ್ರಸ್ಟ್‌ನ ವಾರ್ಷಿಕವಾಗಿ ಕೊಡ ಮಾಡುವ `ಗೋಕುಲ ರತ್ನ’ ಬಿರುದು, ಪ್ರಶಸ್ತಿ ಪ್ರದಾನಿಸಿ ಗೌರವಿಸಿತ್ತು.

ಮೃತರು ಇಬ್ಬರು ಗಂಡು ಲಕ್ಷ್ಮೀಶ್ ಆಚಾರ್ಯ (ಸಂಜೀವಿನಿ ಟ್ರಸ್ಟ್‌ನ ವಿಶ್ವಸ್ಥ ಸದಸ್ಯ) ಮತ್ತು ಜಗದೀಶ್ ಆಚಾರ್ಯ, ಎರಡು ಹೆಣ್ಣು ಉಷಾ ಚಡಗ ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ (ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ನಿರ್ದೇಶಕಿ) ಅಳಿಯಂದಿರಾದ ರಾಮಕೃಷ್ಣ ಚಡಗ, ಕೃಷ್ಣಮೂರ್ತಿ ಐತಾಳ್, ಡಾ| ಸುರೇಶ್ ಎಸ್.ರಾವ್ ಕಟೀಲು (ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಮತ್ತು ಬಿ‌ಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷ) ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.

ಬಿ‌ಎಸ್‌ಕೆಬಿ ಅಸೋಸಿಯೇಶನ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ ಮುಂಬಯಿ ಸೇರಿದಂತೆ ಅನೇಕ ಸಂಸ್ಥೆಗಳ ಪದಾಧಿಕಾರಿಗಳು, ಉಡುಪಿ ಶ್ರೀ ಪೇಜಾವರ ಮಠ ಮುಂಬಯಿ ಶಾಖೆ, ಉಡುಪಿ ಶ್ರೀ ಅದಮಾರು ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಶ್ರೀಮತಿ ರತ್ನಾ ಜಿ.ಆಚಾರ್ಯ
ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿ ಅಲ್ಲಿನ ಸಾಂತೂರುನಲ್ಲಿ 1930ರಲ್ಲಿ ಕಂಬಳಗುತ್ತು ಸುಂದರ ರಾವ್ ಮತ್ತು ಮಾಧವಿ ದಂಪತಿಯ ಆರು ಮಕ್ಕಳಲ್ಲಿ ಹಿರಿಯ ಮಗಳಾಗಿ ಜನಿಸಿದ ಇವರಿಗೆ ಮೂರು ಸಹೋದರಿಯರು ಹಾಗೂ ಇಬ್ಬರು ಸಹೋದರರು.

ಶ್ರೀಮತಿ ರತ್ನಾ ಆಚಾರ್ಯ 14ರ ಎಳೆ ವಯಸ್ಸಿನಲ್ಲಿ ಕಟಪಾಡಿ ಸಮೀಪದ ಅಚ್ಚಡದ ಗುರುರಾಜ ಆಚಾರ್ಯ ಅವರನ್ನು ವಿವಾಹವಾಗಿ ಮುಂಬಯಿಗೆ ಆಗಮಿಸಿದರು. ಉಷಾ ಚಡಗ, ಲಕ್ಷೀಶ ಆಚಾರ್ಯ, ಉಮಾ ಐತಾಳ್, ಜಗದೀಶ್ ಆಚಾರ್ಯ, ಹಾಗೂ ವಿಜಯಲಕ್ಷೀ ರಾವ್ ಇವರ ಐದು ಮಕ್ಕಳು. ರಾಮಕೃಷ್ಣ ಚಡಗ, ವನಿತಾ ಆಚಾರ್ಯ, ಕೆ.ಕೃಷ್ಣಮೂರ್ತಿ ಐತಾಳ್, ಮೀರಾ ಆಚಾರ್ಯ ಹಾಗೂ ಡಾ| ಸುರೇಶ್ ಎಸ್.ರಾವ್ ಇವರ ಅಳಿಯಂದಿರು ಹಾಗೂ ಸೊಸೆಯಂದಿರು. ಹೆಚ್ಚು ವಿದ್ಯಾಭ್ಯಾಸವನ್ನು ಮಾಡದಿದ್ದರೂ ಪತಿಯ ಪ್ರೋತ್ಸಾಹ, ಹಾಗೂ ಸದಾ ಏನಾದರೂ ಕಲಿಯಬೇಕೆಂಬ ಹಂಬಲ, ಉತ್ಸಾಹವುಳ್ಳ ಶ್ರೀಮತಿಯವರು ತಾನು ವಾಸವಾಗಿದ್ದ ಗಿರ್ಗಾಂವ್ ಪರಿಸರವನ್ನೇ ಪಾಠಶಾಲೆಯೆಂದು ತಿಳಿದು, ಮರಾಠಿ, ಹಿಂದಿ ಮುಂತಾದ ಹಲವಾರು ಭಾಷೆಗಳನ್ನು ಹಾಗೂ ಹೊಲಿಗೆ,ರಂಗೋಲಿ, ಕಸೂತಿ ಇತ್ಯಾದಿಗಳನ್ನು ಕಲಿತವರು.ಕನ್ನಡ ವನಿತಾ ಸಮಾಜ, ಮಹಿಳಾ ವಸತಿ ಗೃಹ, ಕನ್ನಡ ಸ್ನೇಹಿತರ ಬಳಗ ಮುಂತಾದ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆ ಗೈದ ಅಸಾಮಾನ್ಯ ಸಾಧಕಿ. ೮೫ನೇ ಹರಯದಲ್ಲಿಯೂ ಉತ್ಸಾಹದ ಚಿಲುಮೆಯಾಗಿ, ಅತ್ಯಂತ ಚಟುವಟಿಕೆಯಿಂದಿದ್ದ ರತ್ನಾ ಆಚಾರ್ಯ ತನ್ನ ಕುಟುಂಬ, ಬಳಗದವರಿಗೆ ಮಾತ್ರವಲ್ಲ ಸಮಾಜಕ್ಕೆ ಕೂಡಾ ಸ್ಫೂರ್ತಿದಾಯಕಿ. ಇವರು ಹಾಗೂ ಇವರ ಪತಿ ಗುರುರಾಜ ಆಚಾರ್ಯ ಅವರು ಗೋಕುಲದ ಅಭಿಮಾನಿ ಹಾಗೂ ಶ್ರೀ ಗೋಪಾಲಕೃಷ್ಣನ ಪರಮ ಭಕ್ತರು.

ಹಲವಾರು ವರ್ಷ ಗೋಕುಲದ ಕಾರ್ಯಕಾರೀ ಸಮಿತಿಯ ಸದಸ್ಯೆಯಲ್ಲಿದ್ದು ಗೋಕುಲದ ಸೇವೆ ಗೈದವರು. ಇವರ ಪತಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ತುಳಸಿ ವೃಂದಾವನದ ಎದುರು ದೇವರಿಗೆ ನಮಸ್ಕರಿಸಿದಂತೆಯೇ ದೇಹ ತ್ಯಾಗಮಾಡಿ ಶ್ರೀ ಕೃಷ್ಣನಲ್ಲಿ ಐಕ್ಯರಾದಂತಹ ಪುಣ್ಯಾತ್ಮ. ಸದಾ ಹಸನ್ಮುಖಿಯಾಗಿದ್ದು ಗೋಕುಲದಲ್ಲಿ `ಮೇಗಾ ಶೋ ಉಮಾ ಐತಾಳ್’ ಎಂದೇ ಪ್ರಸಿದ್ಧರಾದ ತನ್ನ ಮಗಳು ಉಮಾ ಐತಾಳ್ ರವರ ಅಕಾಲ ಮೃತ್ಯುವಿನ ನೋವನ್ನು ಹೃದಯದಲ್ಲಿ ಅದುಮಿಟ್ಟುಕೊಂಡು ಎಲ್ಲವೂ ದೈವೇಚ್ಛೆ, ನಮ್ಮದೇನೂ ಇಲ್ಲ ಎಂದು ತನ್ನನ್ನು ತಾನೇ ಸಮಾಧಾನ ಮಾಡಿಕೊಂಡವರು.

ಭಜನೆ ಎಂದರೆ ಅತ್ಯಂತ ಪ್ರೀತಿ ಆಸಕ್ತಿಯುಳ್ಳ ಶ್ರೀಮತಿಯವರು 20ವರ್ಷಗಳಿಂದ ಶ್ರೀ ಮಧ್ವೇಶ ಭಜನ ಮಂಡಳಿಯ ಅಧ್ಯಕ್ಷೆಯಾಗಿದ್ದು ಎಲ್ಲಾ ಮಹಿಳೆಯರನ್ನು ತನ್ನ ಪ್ರೀತಿಯುತ ಮಾತುಗಳಿಂದ ಹುರಿದುಂಬಿಸುತ್ತಾ, ಪ್ರೋತ್ಸಾಹಿಸುತ್ತಾ ಪೇಜಾವರ ಮಠದಲ್ಲಿ ಭಜನಾ ತರಗತಿಯನ್ನು ಅವಿರತವಾಗಿ ನಡೆಸುತ್ತಾ ಬಂದಿರುವ ಅಪ್ರತಿಮ ಸಂಘಟಕಿ. ಶ್ರೀ ಕೃಷ್ಣನ ಸೇವೆ ಮಾಡುವುದು ಹಾಗೂ ಮಾಡುವವರನ್ನು ಕಂಡರೆ ಪ್ರೀತಿ, ಅಭಿಮಾನ. ಆದರ್ಶ ಗೃಹಿಣಿಯಾಗಿ, ಪ್ರೀತಿಯ ತಾಯಿಯಾಗಿ, ತನ್ನ ಪರಿವಾರ ಹಾಗೂ ಸಮಾಜಕ್ಕೆ ಮಾರ್ಗದರ್ಶಕಿಯಾಗಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸಂಸಾರದಲ್ಲಿದ್ದುಕೊಂಡು ಸಾಧನೆಯನ್ನು ಮಾಡಿದವರು ಶ್ರೀಮತಿ ರತ್ನಾ ಆಚಾರ್ಯ. ಕರ್ನಾಟಕ ಸಂಘದಿಂದ `ಕನ್ನಡ ಸಾಹಿತ್ಯ ಪರಿಷತ್ ಗೌರವ ಪುರಸ್ಕಾರ’, ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ, ಬಿ‌ಎಸ್‌ಕೆಬಿ ಅಸೋಸಿಯೇಶನ್‌ನ ಬ್ರಹ್ಮಕಲಶೋತ್ಸವ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಸಮಿತಿ ಮುಂತಾದ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದವರು. ಕಳೆದ ವರ್ಷ ಗಣರಾಜ್ಯದಂದು ಬಿ‌ಎಸ್‌ಕೆಬಿ ಅಸೋಸಿಯೇಶನ್ ಇವರಿಗೆ ಗೋಕುಲದ ಉನ್ನತ `ಗೋಕುಲ ರತ್ನ’ ಪ್ರಶಸ್ತಿಯನ್ನಿತ್ತು ಸನ್ಮಾನಿಸಿದೆ.

ಗೋಕುಲದ ಪುನರ್ ನಿರ್ಮಾಣದ ಬಗ್ಗೆ ಅತ್ಯಂತ ಆಸಕ್ತಿಯಿದ್ದ ಅಮ್ಮ ಕಳೆದ ವರ್ಷ ಹೇಳಿದ ಮಾತು-`ಒಂದು ಬಹು ದೊಡ್ಡ ಬ್ರಹ್ಮರಥವನ್ನು ಎಳೆಯುವ ಕಾರ್ಯಕ್ಕೆ ಕೈ ಹಾಕಿದ್ದೇವೆ. ನಾವೆಲ್ಲಾ ಒಟ್ಟಿಗೆ ಸೇರಿ ಆನೆಯ ಬಲ ಹಾಕಿ ಆ ರಥವನ್ನು ಎಳೆಯಬೇಕು. ಆಗ ರಥ ಮುಂದೆ ಹೋಗುತ್ತದೆ. ಆ ಕೆಲಸಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆಂದು ಆಶಿಸುತ್ತೇನೆ’ ಅಂದಿದ್ದರು. ಇದೀಗ ಗೋಕುಲದ ಪುನರ್ ನಿರ್ಮಾಣಕ್ಕಾಗಿ ಅಲ್ಲಿನ ಆರಾಧ್ಯ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಸ್ಥಳಾಂತರ ಮಾಡಿ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠೆ ಮಾಡಿದ ಸಮಾಧಾನದಿಂದ ಅಂದೇ ರಾತ್ರಿ ಇಹ ಲೋಕವನ್ನು ತ್ಯಜಿಸಿದ ದಿವ್ಯಾತ್ಮ ರತ್ನಾ ಆಚಾರ್ಯ ಅವರದು.

ಅವರು ಮಗಂದಿರು, ಮಗಳಂದಿರು, ಅಳಿಯಂದಿರು, ಸೊಸೆಯಂದಿರು, ತಮ್ಮಂದಿರು, ಅಡ್ವೋಕೇಟ್ ಭಾಸ್ಕರ್ ರಾವ್, ಉದ್ಯಮಿ ಎಸ್.ಕೆ ಚಂದ್ರಶೇಖರ್ ರಾವ್, ಸೋದರಿಯರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. `ಅಳಿಯುವುದು ಕಾಯ, ಉಳಿಯುವುದು ಕೀರ್ತಿ’ ಎಂಬಂತೆ ನಾವು ಎಷ್ಟು ಕಾಲ ಬದುಕಿದೆವು ಅನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದು ಪ್ರಾಮುಖ್ಯವೆಂಬುವುದನ್ನು ಸಮಾಜಕ್ಕೆ ತೋರಿಸಿ ಕೊಟ್ಟ ಧೀಮಂತ ಮಹಿಳೆ ಶ್ರೀಮತಿ ರತ್ನಾ ಆಚಾರ್ಯ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲೆಂದೇ ಪರಿವಾರ ಹಾಗೂ ಅಭಿಮಾನಿಗಳ ಪ್ರಾರ್ಥನೆ.

Comments are closed.