ಮುಂಬೈ

ಶಿವಾಜಿ ಸ್ಮಾರಕದಿಂದ ಜೀವವೈವಿಧ್ಯಕ್ಕೆ ಧಕ್ಕೆ!

Pinterest LinkedIn Tumblr

smaraka
ಮುಂಬೈ: ಮುಂಬೈನ ಅರಬ್ಬಿ ಸಮುದ್ರ ತಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿವಾಜಿ ಸ್ಮಾರಕಕ್ಕೆ ಸ್ಥಳೀಯ ಮೀನುಗಾರರು ಹಾಗೂ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಸ್ಮಾರಕ ನಿರ್ಮಾಣದಿಂದ ಸಮುದ್ರದ ಜೀವವೈವಿಧ್ಯಕ್ಕೆ ಧಕ್ಕೆಯಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಮಾರಕ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ಮೀನುಗಾರರು ದೋಣಿಗಳಲ್ಲಿ ಕಪ್ಪುಭಾವುಟ ಪ್ರದರ್ಶಿಸಿ ಸಮುದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಶನಿವಾರ ಸ್ಮಾರಕಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯುವ ಕಾರಣ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 50 ಮಂದಿ ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಯಕ್ರಮದ ಕಾರಣಕ್ಕೆ ಮುಂಬೈನ ಮೂರು ಮುಖ್ಯ ಮೀನು ಮಾರುಕಟ್ಟೆಗಳಾದ ಸಸ್ಸೂನ್‌ ಡಕ್‌, ಭೌಚ ಢಕ್ಕಾ ಮತ್ತು ಕ್ರಾಫರ್ಡ್‌ ಅನ್ನು ಶನಿವಾರ ಮುಚ್ಚಿಸಲಾಗಿತ್ತು. ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರೂ ಈ ಸ್ಮಾರಕ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ 15.96 ಹೆಕ್ಟೇರ್‌ ಪ್ರದೇಶದಲ್ಲಿ ₹3,600 ಕೋಟಿ ವೆಚ್ಚದ ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ‘ಜಲಪೂಜೆ’ ನೆರವೇರಿಸಿದ್ದಾರೆ. ಶಿವಾಜಿ ಸ್ಮಾರಕದಲ್ಲಿ ಶಿವಾಜಿ ಪ್ರತಿಮೆ, ವಸ್ತುಸಂಗ್ರಹಾಲಯ ಹಾಗೂ ಸಮುದ್ರ ಮತ್ಸ್ಯಾಗಾರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಸ್ಮಾರಕ ನಿರ್ಮಾಣದಿಂದ ಮುಂಬೈ ಕಡಲ ತೀರದ 110 ಕಿ.ಮೀ. ವ್ಯಾಪ್ತಿಯ ಜೀವವೈವಿಧ್ಯಕ್ಕೆ ಧಕ್ಕೆಯಾಗುವುದಲ್ಲದೆ 80 ಸಾವಿರಕ್ಕೂ ಹೆಚ್ಚು ಮೀನುಗಾರರ ಜೀವನಕ್ಕೆ ಅಡ್ಡಿಯಾಗಲಿದೆ ಎಂದು ದೂರಿ ಅಖಿಲ ಮಹಾರಾಷ್ಟ್ರ ಮೀನುಗಾರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ದಾಮೋದರ್‌ ತಂಡೇಲ್‌ ಮತ್ತು ಪರಿಸರವಾದಿ ಪ್ರದೀಪ್‌ ಪಟಾಡೆ ಅವರು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (ಎನ್‌ಜಿಟಿ) ಅರ್ಜಿ ಸಲ್ಲಿಸಿದ್ದಾರೆ.

‘ಸ್ಮಾರಕ ನಿರ್ಮಾಣವಾದರೆ ಮೀನುಗಾರಿಕೆ ಮೇಲೆ ಪ್ರತೀಕೂಲ ಪರಿಣಾಮವಾಗಲಿದೆ. ಸ್ಮಾರಕ ನಿರ್ಮಾಣವಾದ ಬಳಿಕ ಈ ಪ್ರದೇಶಕ್ಕೆ ನಿತ್ಯ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದ ಈ ಪ್ರದೇಶದ ಜೀವವೈವಿಧ್ಯಕ್ಕೆ ಅಪಾಯ ಎದುರಾಗಲಿದೆ’ ಎಂದು ಪ್ರದೀಪ್‌ ಪಟಾಡೆ ಹೇಳಿದ್ದಾರೆ.

‘ಮೀನುಗಾರಿಕೆಗೆ ಅಡೆತಡೆ ಒಡ್ಡುವ, ಜೀವವೈವಿಧ್ಯಕ್ಕೆ ಧಕ್ಕೆ ತರುವ ಈ ಸ್ಮಾರಕ ನಿರ್ಮಾಣದ ಅಗತ್ಯವೇನಿದೆ’ ಎಂದು ಪಟಾಡೆ ಪ್ರಶ್ನಿಸಿದ್ದಾರೆ.

Comments are closed.