ಮುಂಬೈ: ಪ್ರೀತಿಸಿದ ಹುಡುಗಿ ಕೈಗೆ ಸಿಗಲಿಲ್ಲ. ಅವಳು ಇನ್ಯಾರನ್ನೋ ಮದುವೆಯಾಗ್ತಾಳೆ ಎಂದು ಪ್ರೇಮಿಯೊಬ್ಬ ತನ್ನ ಮಾಜಿ ಪ್ರಿಯತಮೆಯನ್ನು ನೇಣು ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಪೂರ್ವ ಮಲಾಡ್ನಲ್ಲಿ ನಡೆದಿದೆ. ತನ್ನ ವಿಕೃತಿ ಮೆರೆಯಲು ಹೋದ 24 ವರ್ಷದ ಪ್ರಿಯಕರ ಈಗ ಜೈಲು ಸೇರಿದ್ದು ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕಂಬಿ ಎಣಿಸುತ್ತಿದ್ದಾನೆ.
20 ವರ್ಷದವನಿಗೆ 21ರವಳ ಮೇಲೆ ಮೂಡಿತ್ತು ಪ್ರೀತಿ: ಈ ಪ್ರೇಮ ಕಥೆ ಶುರುವಾಗಿದ್ದು 4 ವರ್ಷದ ಹಿಂದೆ. ಹುಡುಗ ರಾಕೇಶ್ ಗುಪ್ತಾಗೆ ಈಗ 24 ವರ್ಷ, ಹುಡುಗಿಗೆ 25 ವರ್ಷ. 4 ವರ್ಷದ ಪ್ರೀತಿಯಲ್ಲಿ ಮಿಂದೆದ್ದ ಹುಡುಗಿಯ ಮನೆಯಲ್ಲಿ ರಾಕೇಶ್ ಗುಪ್ತಾ ಮನೆ ಅಳಿಯನಾಗಿ ಬರೋದು ಇಷ್ಟವಿರಲಿಲ್ಲ. ಹೀಗಾಗಿ ಆಕೆ ಆತನ ಜೊತೆ ಸಂಬಂಧ ಕಟ್ ಮಾಡಿಕೊಂಡು ಕುಟುಂಬಕ್ಕೆ ವಿಧೇಯತೆ ತೋರಲು ಮುಂದಾಗಿದ್ದಾಳೆ. ಇದಾದ ಬಳಿಕ ಆಕೆಗೆ ಮದುವೆ ಸಂಬಂಧ ಕುದುರುತ್ತೆ, ಎಂಗೇಜ್ಮೆಂಟೂ ಆಗುತ್ತೆ. ಈ ವಿಚಾರ ಅದ್ಹೇಗೋ ರಾಕೇಶ್ಗೆ ಗೊತ್ತಾಗಿದೆ. ತಕ್ಷಣ ಎಂಗೇಜ್ ಆದ ಹುಡುಗನ ವಿವರ ಸಂಗ್ರಹಿಸಿದ ಆತ ತನ್ನ ಹಾಗೂ ಆಕೆಯ ನಡುವೆ ಇದ್ದ ಸಂಬಂಧದ ಮಾಹಿತಿಯನ್ನು ನೀಡುತ್ತಾನೆ. ಇದಾದ ಬಳಿಕ ಈ ಸಂಬಂಧ ಮುರಿದು ಬೀಳುತ್ತೆ.
ಕಳೆದ ತಿಂಗಳು ಮತ್ತೆ ಹುಡುಗಿಗೆ 2ನೇ ಎಂಗೇಜ್ಮೆಂಟ್ ನಡೆಯುತ್ತದೆ. ಇನ್ಯಾವ ಕಾರಣಕ್ಕೂ ಈಕೆ ತನಗೆ ದಕ್ಕಲ್ಲ ಎಂಬ ಮನೋಸ್ಥಿತಿಗೆ ಬಂದ ಆತ ಆಕೆಗೆ ತಕ್ಕ ಪಾಠ ಕಲಿಸಿಯೇ ಕಲಿಸುತ್ತೇನೆ ಎಂದು ನಿರ್ಧರಿಸುತ್ತಾನೆ.
ಅಕ್ಟೋಬರ್ 1ಕ್ಕೆ ಪ್ರಿಯತಮೆಗೆ ಫೋನ್ ಮಾಡಿದ ಆತ, ಕೆಲಸ ಮುಗಿದ ಬಳಿಕ ಮನೆಗೆ ಬಾ ಎಂದು ಕರೆಯುತ್ತಾನೆ. ಮನೆಗೆ ಬಂದ ಆತ ಆಕೆಗೆ ನೆಪ ಹೇಳಿ ಮನೆಯ ಅಡುಗೆ ಮನೆಗೆ ಹೋಗುವಂತೆ ಮಾಡುತ್ತಾನೆ. ಆಕೆ ಒಳಹೋಗುತ್ತಿದ್ದಂತೆಯೇ ಹಿಂಬಾಲಿಸಿದ ಆತ ಆಕೆಯನ್ನು ಅಲ್ಲೇ ಇದ್ದ ಹಗ್ಗದಲ್ಲಿ ನೇಣು ಹಾಕಲು ಶ್ರಮಿಸುತ್ತಾನೆ. ತಕ್ಷಣ ಎಚ್ಚೆತ್ತ ಆಕೆ ಕೂಗಾಡುತ್ತಾಳೆ. ಆಕೆಯ ಕಿರುಚಾಟ ಕೇಳುತ್ತಿದ್ದಂತೆ ಅಪಾಯದ ಮುನ್ನೆಚ್ಚರಿಕೆ ಅರಿತ ರಾಕೇಶ್ ಅಲ್ಲಿಂದ ಪರಾರಿಯಾಗುತ್ತಾನೆ.
ಅಕ್ಕಪಕ್ಕದ ಮನೆಯವರು ಬಂದಾಗ ಮಾಜಿ ಪ್ರಿಯತಮೆ ಎಲ್ಲ ವಿಚಾರಗಳನ್ನೂ ವಿವರಿಸುತ್ತಾಳೆ. ತಕ್ಷಣ ಪೋಷಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರ ತಂಡ ರಾಕೇಶ್ ಗುಪ್ತಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Comments are closed.