ಮುಂಬೈ

ಚಿಕನ್ ಸೂಪಲ್ಲಿ ಚಿಕನ್ ಇಲ್ಲದ್ದಕ್ಕೆ ಹೋಟೆಲ್ ಮಾಲಕನಿಗೆ ಕಬ್ಬಿಣದ ರಾಡಿನಿಂದ ಹಲ್ಲೆ

Pinterest LinkedIn Tumblr

buter-chickenಮುಂಬೈ: ಚಿಕನ್ ಸೂಪ್‍ನಲ್ಲಿ ಚಿಕನ್ ಇರಲಿಲ್ಲ ಎಂದು ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕನಿಗೆ ಹಾಗೂ ಇನ್ನಿಬ್ಬರ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ ಘಟನೆ ಮುಂಬೈನ ಆಂಟಾಪ್ ಹಿಲ್‍ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಹೋಟೆಲ್ ಮಾಲೀಕ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?: ಶುಕ್ರವಾರ ರಾತ್ರಿ 10.45ರ ವೇಳೆಗೆ ಲಾತೂರ್ ಮೂಲದ ಟ್ರಕ್ ಚಾಲಕ ಮಚ್ಚೀಂದ್ರ ಶಿವಮೋರೆ ಆಂಟಾಪ್ ಹಿಲ್‍ನಲ್ಲಿರುವ ರೆಸ್ಟೋರೆಂಟ್‍ಗೆ ಊಟ ಮಾಡಲೆಂದು ಬಂದಿದ್ದಾನೆ. ಈ ವೇಳೆ ಅನ್ನ ಹಾಗೂ ಚಿಕನ್ ನೀಡುವಂತೆ ಮಚ್ಚೀಂದ್ರ ಆರ್ಡರ್ ಮಾಡಿದಾಗ ರೆಸ್ಟೋರೆಂಟ್ ಮಾಲೀಕ 65 ವರ್ಷದ ಮಹದೇವ್ ಪವಾಸ್ಕರ್ ಚಿಕನ್ ಸೂಪ್ ಇದೆ. ಆದರೆ ಅದರಲ್ಲಿ ಚಿಕನ್ ಸ್ಲೈಸ್‍ಗಳಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಶಿವಮೋರೆ ಏನೂ ಹೇಳದೆ ಊಟಕ್ಕೆ ಆರ್ಡರ್ ಮಾಡಿದ್ದಾನೆ. ಆದರೆ ಅನ್ನ ಹಾಗೂ ಸೂಪ್ ಸರ್ವ್ ಮಾಡಿದಾಗ ಅದರಲ್ಲಿ ಚಿಕನ್ ಪೀಸ್‍ಗಳೇ ಇರಲಿಲ್ಲ. ಇದನ್ನು ಆತ ಮಾಲೀಕನ ಬಳಿ ಪ್ರಶ್ನಿಸಿದಾಗ, ನಾನು ಈ ವಿಚಾರ ಈ ಮೊದಲೇ ಹೇಳಿದ್ದೆ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಿವಮೋರೆ ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಮಹದೇವ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹದೇವ್ ಸಹೋದರ ಶಿವಾಜಿ ಮಧ್ಯ ಪ್ರವೇಶ ಮಾಡಿದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಶಿವಾಜಿಗೆ ಸಣ್ಣ ಪ್ರಮಾಣದ ಗಾಯವಾದರೆ, ಮಹದೇವ್ ಅವರನ್ನು ಇಲ್ಲಿನ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಆಂಟಾಪ್ ಹಿಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಶಿವಮೋರೆಯನ್ನು ಬಂಧಿಸಿದ್ದು, ಆತನ ಮೇಲೆ ಕೊಲೆ ಯತ್ನದ ದೂರು ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.