ಮುಂಬೈ: ಮಹಾರಾಷ್ಟ್ರದ ರಾಜಭವನ ಸಂಕೀರ್ಣದೊಳಗೆ ಬ್ರಿಟಿಷರ ಕಾಲದ 150 ಮೀಟರ್ ಉದ್ದದ ನೆಲಮಾಳಿಗೆ ಸುರಂಗವನ್ನು ರಾಜ್ಯಪಾಲ ಸಿ.ಎಚ್. ವಿದ್ಯಾಸಾಗರ್ ರಾವ್ ಪತ್ತೆಹಚ್ಚಿ ತೆರೆಸಿದ್ದಾರೆ.
ಮಲಬಾರ್ ಹಿಲ್‌ನಲ್ಲಿನ ರಾಜ ಭವನ ಸಂಕೀರ್ಣದೊಳಗೆ ಇರುವ ಸುರಂಗಕ್ಕೆ ಪತ್ನಿ ವಿನೋದ ಅವರೊಂದಿಗೆ ಕಳೆದ ಗುರುವಾರ ಭೇಟಿ ನೀಡಿದ್ದ ರಾವ್ ಅವರು, ಅದನ್ನು ಸಂರಕ್ಷಿಸಿಡಲು ವಿವಿಧ ಕ್ಷೇತ್ರಗಳ ಪರಿಣತರನ್ನು ಸಂಪರ್ಕಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜಭವನದ ಒಳಗೆ ಸುರಂಗವೊಂದಿದ್ದು, ಕೆಲವು ದಶಕಗಳ ಹಿಂದೆ ಅದನ್ನು ಮುಚ್ಚಲಾಗಿತ್ತು ಎಂದು ರಾಜ್ಯಪಾಲ ರಾವ್ ಅವರಿಗೆ ಕೆಲವರು ಮೂರು ತಿಂಗಳ ಹಿಂದೆ ಮಾಹಿತಿ ನೀಡಿದ್ದರು. ಅದರ ಕುರಿತು ಆಸಕ್ತಿ ವಹಿಸಿದ್ದ ರಾವ್, ಸುರಂಗವನ್ನು ತೆರೆಯುವಂತೆ ಸೂಚನೆ ನೀಡಿದ್ದರು.
ರಾಜಭವನದ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಪೂರ್ವ ಭಾಗದಲ್ಲಿ ಮುಚ್ಚಲಾಗಿದ್ದ ಪ್ರವೇಶದ್ವಾರದ ತಾತ್ಕಾಲಿಕ ಗೋಡೆಯನ್ನು ಆಗಸ್ಟ್ 12ರಂದು ಒಡೆದಾಗ ಅವರಿಗೆ ಅಚ್ಚರಿ ಕಾದಿತ್ತು.
ನೆಲಮಾಳಿಗೆಯಲ್ಲಿ 13 ವಿಭಿನ್ನ ಗಾತ್ರದ ಕೊಠಡಿಗಳಿರುವ ಕಟ್ಟಡ ಪತ್ತೆಯಾಗಿದೆ. ಪಶ್ಚಿಮ ಭಾಗದಲ್ಲಿ 20 ಅಡಿ ಎತ್ತರದ ದ್ವಾರ ಮತ್ತು ಮೆಟ್ಟಿಲ ಸಾಲುಗಳಿವೆ. ಎರಡೂ ಬದಿಗಳಲ್ಲಿ ಉದ್ದನೆಯ ಅಂಕಣ ಮತ್ತು ಸಣ್ಣ ಹಾಗೂ ಮಧ್ಯಮಗಾತ್ರದ ಕೊಠಡಿಗಳಿವೆ.
ಸುಮಾರು 5 ಸಾವಿರ ಚದರ ಅಡಿಯಷ್ಟು ದೊಡ್ಡದಾದ ಸುರಂಗದಲ್ಲಿ ಗುಂಡು ಸಂಗ್ರಹ, ಬಂದೂಕು ಸಂಗ್ರಹ, ಸಿಡಿಮದ್ದು ಸಂಗ್ರಹ, ಕಾರ್ಯಾಗಾರ, ಮುಂತಾದವುಗಳಿಗೆ ಮೀಸಲಿಟ್ಟಿದ್ದ ಕೊಠಡಿಗಳ ಹೆಸರುಗಳಿವೆ. ಅಲ್ಲದೆ, ದಾರಿಯುದ್ದಕ್ಕೂ ಬೆಳಕಿನ ದೀಪಕ್ಕಾಗಿ ಗೂಡುಗಳನ್ನು ನಿರ್ಮಿಸಲಾಗಿದೆ.
ನೆಲಮಾಳಿಗೆಯ ಇಡೀ ಸುರಂಗ ವ್ಯವಸ್ಥೆಯು ಚರಂಡಿ ವ್ಯವಸ್ಥೆ ಮತ್ತು ತಾಜಾ ಗಾಳಿ, ಬೆಳಕಿನ ಸೌಲಭ್ಯವನ್ನು ಹೊಂದಿರುವುದು ಕುತೂಹಲ ಮೂಡಿಸಿದೆ. ಸ್ವಾತಂತ್ರ್ಯ ನಂತರವೇ ಸುರಂಗವನ್ನು ಮುಚ್ಚಲಾಗಿದ್ದರೂ, ಅದು ಈಗ ಅಚ್ಚರಿಯ ಸ್ಥಳವಾಗಿ ಪರಿಣಮಿಸಿದೆ.
ರಾಜಭವನದ ಇತಿಹಾಸದ ಪ್ರಕಾರ, ರಾಜಭವನಕ್ಕೆ ‘ಗೌರ್ನಮೆಂಟ್ ಹೌಸ್’ ಎಂಬ ಹೆಸರಿತ್ತು. 1885ರವರೆಗೂ ಬ್ರಿಟಿಷ್ ಗವರ್ನರ್‌ಗಳ ಬೇಸಿಗೆ ನಿವಾಸವಾಗಿದ್ದ ರಾಜಭವನ ಕಟ್ಟಡವನ್ನು ಲಾರ್ಡ್ ರೆಯೇ ತಮ್ಮ ಕಾಯಂ ನಿವಾಸವನ್ನಾಗಿಸಿ ಪರಿವರ್ತಿಸಿಕೊಂಡಿದ್ದರು.
Comments are closed.