ಕಲಬುರ್ಗಿ: ‘ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲಹಾ ಸಮಿತಿ ನೇಮಕ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಆ.27ರಂದು ಸಮಿತಿಯ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಅಭಿಜಾತ ಕನ್ನಡ ಪಠ್ಯವಾಚನ ಮತ್ತು ಅಧ್ಯಯನ ತರಬೇತಿ ಶಿಬಿರ’ದಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸಮ್ಮೇಳನದ ಆಶಯ, ಗೋಷ್ಠಿಗಳು ಎಷ್ಟಿರಬೇಕು, ವಿಷಯ ಏನು ಎನ್ನುವ ಕುರಿತು ಸಮಿತಿಯ ಸದಸ್ಯರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ. ಎಲ್.ಹನುಮಂತಯ್ಯ, ಡಾ. ಮಲ್ಲಿಕಾ ಘಂಟಿ, ಡಾ. ವೀರಣ್ಣ ದಂಡೆ ಹಾಗೂ ಡಾ. ದೊಡ್ಡರಂಗೇಗೌಡ ಅವರು ಸಲಹೆ–ಸೂಚನೆ ನೀಡುವರು. ಪರಿಷತ್ ಬಳಿ ₹2 ಕೋಟಿ ಅನುದಾನ ಲಭ್ಯವಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಬಗ್ಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
ಕನ್ನಡಿಗರಿಗೆ ಉದ್ಯೋಗ: ಕನ್ನಡ ಅನ್ನದ ಭಾಷೆಯಾಗಬೇಕು ಎಂದು ರಾಜ್ಯದ ಅನೇಕ ಸಾಹಿತಿಗಳು, ವಿದ್ವಾಂಸರು ಸಲಹೆ ನೀಡಿದ್ದರು. ಈ ನಿಟ್ಟಿನಲ್ಲಿ ಈಗಾಗಲೇ ಕನ್ನಡಿಗರಿಗೆ ಉದ್ಯೋಗ, ವಿಜ್ಞಾನ– ತಂತ್ರಜ್ಞಾನ ಸಮಿತಿ ರಚಿಸಲಾಗಿದೆ. ಖಾಸಗಿ ಕಂಪೆನಿಗಳಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗ ಕೊಡಿಸುವ ಸಂಬಂಧ ಡಿಸೆಂಬರ್ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ವೆಬ್‌ಸೈಟ್‌ನಲ್ಲಿ ಮಾದರಿ ಅರ್ಜಿ ನಮೂನೆಯನ್ನು ಅಪ್‌ಲೋಡ್ ಮಾಡಲಾಗುವುದು’ ಎಂದು ಹೇಳಿದರು.
ಕನ್ನಡಿಗರ ಸಮಾವೇಶ: ‘ನವದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಪರಿಷತ್ ವತಿಯಿಂದ ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶವನ್ನು ಅಕ್ಟೋಬರ್ 8, 9ರಂದು ನಡೆಸಲು ತೀರ್ಮಾನಿಸಲಾಗಿದೆ. ಮಧ್ಯಪ್ರದೇಶದ ಅಮರ್‌ಕಂಟಕ್‌ನ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿನಿ ಕಟ್ಟಿಮನಿ ಹಾಗೂ ದೆಹಲಿಯ ಕರ್ನಾಟಕ ಸಂಘದ ಸಹಯೋಗದೊಂದಿಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದರು.
ಸ್ಮಾರಕ ಭವನ ನಿರ್ಮಾಣ: ‘ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ನಾಡಿಗೆ ಅನನ್ಯ ಕೊಡುಗೆ ನೀಡಿ ಮೃತಪಟ್ಟಿರುವ ಗ್ರಾಮೀಣ ಪ್ರದೇಶದ ಕಲಾವಿದರು, ಸಾಹಿತಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಸ್ಮಾರಕ ಭವನ ನಿರ್ಮಿಸುವ ವಿನೂತನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಅವರು ತಮ್ಮ ಇಲಾಖೆಯಿಂದ ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
‘ಕಲಾವಿದರು, ಸಾಹಿತಿಗಳಿಗೆ ಸೇರಿದ 5ರಿಂದ 10 ಗುಂಟೆ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್ ಹೆಸರಿಗೆ ನೋಂದಣಿ ಮಾಡಿಸಬೇಕು. ಭವನಕ್ಕೆ ಸಂಬಂಧಿಸಿದಂತೆ ನೀಲನಕ್ಷೆ ಸಿದ್ಧಪಡಿಸಿ, ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯಿಂದ ಅನುಮೋದನೆ ಪಡೆದು ಪ್ರಸ್ತಾವ ಸಲ್ಲಿಸಬೇಕು. ಒಂದು ಭವನಕ್ಕೆ ₹10ರಿಂದ ₹15 ಲಕ್ಷ ಅನುದಾನ ನೀಡಲು ಸಚಿವರು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.
Comments are closed.